ತಮ್ಮ ಪುತ್ರನ ಹಂತಕ ಕೆಲವೇ ತಿಂಗಳಲ್ಲಿ ಬಂಧಮುಕ್ತನಾಗುತ್ತಿದ್ದು, ತಾವು ಕಾನೂನಿನಿಂದ ವಂಚಿತರಾಗಿದ್ದೇವೆಂದು ಭಾರತೀಯ-ಕೆನಡಾ ಕುಟುಂಬವೊಂದು ಆರೋಪಿಸಿದೆ. ಟೊರಂಟೊದ ಹೊರವಲಯದಲ್ಲಿ ಬ್ರಾಂಪ್ಟನ್ ನಗರದ ಕೋರ್ಟ್‌ನಲ್ಲಿ 14ರ ಪ್ರಾಯದ ರವಿ ಧರಂಡಯಲ್ ಹತ್ಯೆ ಮಾಡಿದ್ದಾಗಿ 15ರ ಪ್ರಾಯದ ಬಾಲಕನೊಬ್ಬ ತಪ್ಪೊಪ್ಪಿಕೊಂಡ ಬಳಿಕ ಬಂಧಿಸಲಾಗಿತ್ತು.
ಒಂದು ದುರ್ದಿನದಂದು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 9ನೇ ಗ್ರೇಡ್ ವಿದ್ಯಾರ್ಥಿ ರವಿಯನ್ನು ಆರೋಪಿ ಬಾಲಕ ಎದೆ ಮತ್ತು ಹೊಟ್ಟೆಗೆ ಐದು ಬಾರಿ ತಿವಿದು ಹತ್ಯೆಮಾಡಿದ್ದ. ಆದರೆ ಎರಡು ಚೂರಿಇರಿತಗಳು ಎದೆಯನ್ನು ಸೀಳಿದ್ದರಿಂದ ಆತ ಆಸ್ಪತ್ರೆಯಲ್ಲಿ ಮೃತಪಟ್ಟ.
ತನಗೆ ಕೆಟ್ಟ ಮಾದಕಪದಾರ್ಥ ಮಾರಾಟಕ್ಕೆ ಯತ್ನಿಸಿದ ರವಿಗೆ ಚೂರಿಯಿಂದ ಇರಿದಿದ್ದಾಗಿ ಆರೋಪಿ ಬಾಲಾಪರಾಧಿ ಕೋರ್ಟ್‌ನಲ್ಲಿ ತಿಳಿಸಿದ್ದ. ಆದರೆ ಮೃತಳ ತಾಯಿ ಸುನಿತಾ ಧರಂದಿಯಲ್ ಕೋರ್ಟ್‌ಗೆ ತಿಳಿಸುತ್ತಾ, ರವಿಯ ಮನೋಧರ್ಮವನ್ನು ಅರಿತಿರುವ ನಾವು ಇದರಲ್ಲಿ ಯಾವುದೇ ಹುರುಳಿಲ್ಲವೆಂದು ಹೇಳಿದ್ದಾರೆ. ಆರೋಪಿ ತಮ್ಮ ಮಗನನ್ನು ಕೊಂದಿದ್ದೇಕೆ? ಈ ಪ್ರಶ್ನೆ ನಮ್ಮನ್ನು ದಿನವೂ ದುಃಸ್ವಪ್ನವಾಗಿ ಕಾಡುತ್ತಿದೆಯೆಂದು ತಾಯಿ ಗೋಳಿಟ್ಟಿದ್ದಾರೆ.
ಆರೋಪಿ ಪ್ರಥಮ ದರ್ಜೆಯ ಕೊಲೆ ಆರೋಪಗಳನ್ನು ಎದುರಿಸಬೇಕಿದ್ದು, ಸಾಕ್ಷಿಗಳ ಕೊರತೆಯಿಂದ ಎರಡನೇ ದರ್ಜೆಯ ಹತ್ಯೆ ಆರೋಪಗಳ ಮೇಲೆ ಅವನಿಗೆ ಶಿಕ್ಷೆ ವಿಧಿಸಲಾಗಿತ್ತು. ಬಾಲಾಪರಾಧಿ ಕಾಯ್ದೆ ಅನ್ವಯ ಎರಡನೇ ದರ್ಜೆ ಹತ್ಯೆಗೆ ಕೆನಡಾದಲ್ಲಿ ಏಳು ವರ್ಷಗಳ ಶಿಕ್ಷೆಯಿದ್ದು, ಅದರಲ್ಲಿ ಎರಡುವರ್ಷ ಸೆರೆಮನೆ ಶಿಕ್ಷೆ ಮತ್ತು ಸಮುದಾಯ ಮೇಲ್ವಿಚಾರಣೆ ಅಡಿಯಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕಾಗಿದೆ.
ಆರೋಪಿ ಈಗಾಗಲೇ ಶಿಕ್ಷೆ ಅನುಭವಿಸಿದ್ದರಿಂದ 8 ತಿಂಗಳೊಳಗೆ ಬಿಡುಗಡೆಯಾಗುತ್ತಿದ್ದಾನೆ.ತಮ್ಮ ಪುತ್ರನ ಹಂತಕನಿಗೆ ಮೃದುವಾದ ಜೈಲುಶಿಕ್ಷೆ ವಿಧಿಸಿದ ಬಗ್ಗೆ ರವಿಯ ತಾಯಿ ಆಕ್ರೋಶಪೂರಿತರಾಗಿದ್ದಾರೆ. 'ನಮ್ಮ ರವಿ ಹಿಂತಿರುಗುವುದಿಲ್ಲ. ಅವನು ಇನ್ನು ನಮ್ಮನ್ನು ಭೇಟಿಯಾಗುವುದಿಲ್ಲ. ಅವನನ್ನು ಸ್ಮಶಾನದಲ್ಲೇ ಭೇಟಿ ಕೊಡಬೇಕು' ಎಂದು ಗದ್ಗದಿತರಾಗಿ ನುಡಿದಿದ್ದಾರೆ.