ಸಂಸ್ಕರಿತ ಯುರೇನಿಯಂ ದಾಸ್ತಾನು ಮಾಡುವ ಮೂಲಕ ಇರಾನ್ ಅಣುಬಾಂಬ್‌ಗಳನ್ನು ತಯಾರಿಸುವ ಸಾಮರ್ಥ್ಯಕ್ಕೆ ಸಮೀಪಿಸುತ್ತಿದೆಯೆಂದು ಅಮೆರಿಕ ಬುಧವಾರ ತಿಳಿಸಿದೆ. ಟೆಹ್ರಾನ್ ವಿರುದ್ಧ ಕಠಿಣ ದಿಗ್ಬಂಧನಗಳಿಗೆ ಪಾಶ್ಚಿಮಾತ್ಯ ಶಕ್ತಿಗಳು ಪರಿಗಣಿಸುತ್ತಿವೆ.
ಅಣ್ವಸ್ತ್ರಗಳ ಆಯ್ಕೆಯನ್ನು ರಕ್ಷಿಸಿಕೊಳ್ಳಲು ಇರಾನ್ ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿರುವುದು ತಮಗೆ ಗಂಭೀರ ಆತಂಕ ಉಂಟುಮಾಡಿದೆಯೆಂದು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಗವರ್ನರ್ ಮಂಡಳಿಗೆ ಅಮೆರಿಕದ ಪ್ರತಿನಿಧಿ ಗ್ಲಿನ್ ಡೇವೀಸ್ ತಿಳಿಸಿದರು. ಇರಾನ್ ಒಂದು ಅಣ್ವಸ್ತ್ರ ನಿರ್ಮಾಣಕ್ಕೆ ಅತೀ ಸಮೀಪದಲ್ಲಿದೆ ಅಥವಾ ಈಗಾಗಲೇ ಸಾಕಷ್ಟು ಕಡಿಮೆ ಸಂಸ್ಕರಿತ ಯುರೇನಿಯಂ ಹೊಂದಿದ್ದು, ಅಪಾಯಕಾರಿ ಮತ್ತು ಅಸ್ಥಿರ ವಿದಳನ ಸಾಮರ್ಥ್ಯಕ್ಕೆ ಹತ್ತಿರದಲ್ಲಿದೆಯೆಂದು ಡೇವಿಸ್ ಹೇಳಿದ್ದಾರೆ.
ಆದರೆ ಇರಾನ್ ಬೆದರಿಕೆ ಉತ್ಪ್ರೇಕ್ಷಿತವೆಂದು ಐಎಇಎ ಮುಖ್ಯಸ್ಥ ಮಹಮದ್ ಎಲ್‌ಬರ್ಡೈ ತಿಳಿಸಿದ್ದಾರೆ. ಆದರೆ ಡೇವಿಸ್ ಪ್ರತಿಕ್ರಿಯೆಯಿಂದ ಇರಾನ್ ಅಣ್ವಸ್ತ್ರ ಅತಿರೇಕದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಅಸಹನೆಗೆ ಸಾಕ್ಷಿಯೊದಗಿಸಿದೆ.