ವಾಷಿಂಗ್ಟನ್, ಗುರುವಾರ, 10 ಸೆಪ್ಟೆಂಬರ್ 2009( 11:02 IST )
ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ನಿಭಾಯಿಸಲು ಭಾರತ ಮತ್ತು ಅಮೆರಿಕ ನಡುವೆ ಸಹಕಾರ ವೃದ್ಧಿ ಮತ್ತು ಈ ವಲಯದಲ್ಲಿ ಪಾಕಿಸ್ತಾನದ ಪಾತ್ರ ಇವು ಕೇಂದ್ರ ಗೃಹಸಚಿವ ಪಿ.ಚಿದಂಬರಂ ಮತ್ತು ಒಬಾಮಾ ಆಡಳಿತದ ಉನ್ನತಾಧಿಕಾರಿಗಳ ನಡುವೆ ಗುರುವಾರ ನಡೆದ ಚರ್ಚೆಯಲ್ಲಿ ಪ್ರಮುಖ ವಿಷಯಗಳಾಗಿತ್ತು.
ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಜೇಮ್ಸ್ ಜೋನ್ಸ್ ಅವರನ್ನು ಚಿದಂಬರಂ ಭೇಟಿ ಮಾಡಿದಾಗ, 26/11 ದಾಳಿಗೆ ಕಾರಣಕರ್ತರ ಮೇಲೆ ಕ್ರಮಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪಾತ್ರವು ವಿಶೇಷವಾಗಿ ಚರ್ಚೆಯಾಯಿತೆಂದು ನಂಬಲಾಗಿದೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಜೋನ್ಸ್ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಲ್ಲಿ ಉಭಯರಾಷ್ಟ್ರಗಳ ನಡುವೆ ಸಹಕಾರ ವೃದ್ಧಿಯ ಪರವಾಗಿದ್ದಾರೆಂದು ಹೇಳಲಾಗಿದೆ.
ಭದ್ರತಾ ಕಾರ್ಯದರ್ಶಿ ಜ್ಯಾನೆಟ್ ನಪೋಲಿಟಾನೊ ಮತ್ತು ಅಮೆರಿಕ ಅಟಾರ್ನಿ ಜನರಲ್ ಎರಿಕ್ ಎಚ್ ಹೋಲ್ಡರ್ ಜೂ. ಅವರನ್ನು ಚಿದಂಬರಂ ಬೆಳಿಗ್ಗೆ ಭೇಟಿ ಮಾಡಿದ್ದರು. ಗುಪ್ತಚರಕ್ಕೆ ಸಂಬಂಧಿಸಿದ ಸೆನೆಟ್ ಆಯ್ಕೆ ಸಮಿತಿಯ ಅಧ್ಯಕ್ಷೆ, ಸೆನೆಟ್ ಸದಸ್ಯೆ ಡಯಾನ ಫೈನ್‌ಸ್ಟೈನ್ ಅವರನ್ನು ಭೇಟಿ ಮಾಡಿದ್ದರು. ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರನ್ನು ಕೂಡ ಚಿದಂಬರಂ ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದೆ.