ಇಸ್ಲಾಮಾಬಾದ್, ಗುರುವಾರ, 10 ಸೆಪ್ಟೆಂಬರ್ 2009( 12:26 IST )
ಭಾರತ ಹೊಸದಾಗಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದರೆ ಮುಯ್ಯಿಗೆ ಮುಯ್ಯಿ ನೀತಿಯನ್ನು ಪಾಕಿಸ್ತಾನ ಅನುಸರಿಸುವುದಿಲ್ಲ ಮತ್ತು ತನ್ನ ಹಿತಾಸಕ್ತಿಗಳ ರಕ್ಷಣೆಯ ಸಾಮರ್ಥ್ಯ ಹೊಂದಿದೆಯೆಂದು ವಿದೇಶಾಂಗ ಸಚಿವ ಶಾ ಮಹಮೂದ್ ಹೇಳಿದ್ದಾರೆ.
ವಿದೇಶಾಂಗ ಕಚೇರಿಯಲ್ಲಿ ಪತ್ರಕರ್ತರಿಗೆ ಇಫ್ತಾರ್ ಕೂಟದ ಆತಿಥ್ಯ ವಹಿಸಿದ ನೇಪಥ್ಯದಲ್ಲಿ ಖುರೇಷಿ ಮಾತನಾಡುತ್ತಿದ್ದರು. 1998ರ ಮೇ ತಿಂಗಳಿನಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳ ಯಶಸ್ಸಿನ ಬಗ್ಗೆ ಭಾರತದ ಪ್ರಮುಖ ರಕ್ಷಣಾ ವಿಜ್ಞಾನಿಯೊಬ್ಬರು ಪ್ರಶ್ನೆ ಮಾಡಿದ್ದರಿಂದ ಭಾರತ ಮತ್ತಷ್ಟು ಪರೀಕ್ಷೆಗಳನ್ನು ನಡೆಸುವ ಬಗ್ಗೆ ಊಹಾಪೋಹಗಳು ಹರಡಿತ್ತೆಂದು ಖುರೇಷಿ ತಿಳಿಸಿದ್ದಾರೆ.
ಈ ಕುರಿತು ಭಾರತದಲ್ಲಿ ಚರ್ಚೆ ನಡೆಯುತ್ತಿದ್ದು, ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲವೆಂದು ಅವರು ಹೇಳಿದರು. ಒಂದೊಮ್ಮೆ ಪುನಃ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಭಾರತ ನಿರ್ಧರಿಸಿದರೆ, ಪಾಕಿಸ್ತಾನ ಅದನ್ನು ಪರಿಶೀಲನೆ ಮಾಡಿ ತನ್ನ ಅಭಿಪ್ರಾಯಗಳನ್ನು ನೀಡುತ್ತದೆಂದು ಅವರು ನುಡಿದರು.ಭಾರತ 1998 ಮೇನಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದ ಹಿಂದೆಯೇ ಪಾಕಿಸ್ತಾನವೂ ಅಣು ಪರೀಕ್ಷೆಗಳನ್ನು ನಡೆಸಿತು. ಆಗಿನಿಂದ ಉಭಯ ರಾಷ್ಟ್ರಗಳು ಮತ್ತಷ್ಟು ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿಯಂತ್ರಣ ಕಾಯ್ದುಕೊಂಡಿದೆ.