ಅಮೆರಿಕದಲ್ಲಿ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಸೂತ್ರಧಾರಿ, ಅಲ್ ಖಾಯಿದಾದ ಮುಖಂಡ ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆಂದು ನಂಬಿರುವುದಾಗಿ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಿಳಿಸಿದ್ದಾರೆ. ಬಿಬಿಸಿ ಜತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಬದುಕಿರುವಂತೆ ಕಾಣುತ್ತಿಲ್ಲವೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಬಳಿಕ ಅಲ್ ಖಾಯಿದಾ ನಾಯಕ ಭೂಗತನಾಗಿದ್ದು, ಅವನನ್ನು ಜೀವಂತ ಅಥವಾ ಹೆಣವಾಗಿ ಹಿಡಿಯಲು ಅಮೆರಿಕ ಶತಪ್ರಯತ್ನ ಮಾಡುತ್ತಿದೆ. ಆದರೆ ಆಫ್ಘಾನಿಸ್ತಾನದ ಪರ್ವಚ್ಛಾದಿತ ಪ್ರದೇಶಗಳಲ್ಲಿ ಲಾಡೆನ್ ತಪ್ಪಿಸಿಕೊಂಡು ತಿರುಗುತ್ತಿದ್ದಾನೆಂದು ವದಂತಿಗಳು ಹರಡಿದ್ದವು. ಲಾಡೆನ್ ತಲೆಗೆ ಬಹುಮಾನವನ್ನೂ ಅಮೆರಿಕ ಘೋಷಿಸಿದೆ.
ಲಾಡೆನ್ ಸತ್ತಿದ್ದಾನೆಂಬ ಜರ್ದಾರಿ ಹೇಳಿಕೆಗೆ ಯಾವುದೇ ಆಧಾರವನ್ನೂ ಜರ್ದಾರಿ ನೀಡಿಲ್ಲವೆಂದು ಹೇಳಲಾಗಿದೆ.ಪ್ರಜಾಪ್ರಭುತ್ವು ಪಾಕಿಸ್ತಾನದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಉಗ್ರವಾದದ ವಿರುದ್ಧ ಹೋರಾಟಕ್ಕೆ ಮತ್ತು ದೇಶದ ನೆಲದಿಂದ ಭಯೋತ್ಪಾದನೆ ನಿರ್ಮೂಲನೆಗೆ ಸರ್ಕಾರ ದೃಢಸಂಕಲ್ಪ ಮಾಡಿದೆಯೆಂದು ಜರ್ದಾರಿ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನಕ್ಕೆ ಇನ್ನಷ್ಟು ಆರ್ಥಿಕ ನೆರವು ನೀಡುವಂತೆ ಜರ್ದಾರಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದು, ದೇಶವನ್ನು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಸಂಪನ್ಮೂಲಗಳ ಕೊರತೆಯೆಂದು ಜರ್ದಾರಿ ಹೇಳಿದ್ದಾರೆ.