ಇಸ್ಲಾಮಾಬಾದ್, ಶುಕ್ರವಾರ, 11 ಸೆಪ್ಟೆಂಬರ್ 2009( 16:31 IST )
ಸ್ವಾಟ್ ಕಣಿವೆಯ ತಾಲಿಬಾನ್ ವಕ್ತಾರ ಮುಸ್ಲಿಂಖಾನ್‌ನನ್ನು ಪ್ರಮುಖ ಉಗ್ರಗಾಮಿ ಮತ್ತು ಇನ್ನೂ ಮೂವರ ಜತೆ ಬಂಧಿಸಿರುವುದಾಗಿ ಪಾಕಿಸ್ತಾನ ಸೇನೆ ಶುಕ್ರವಾರ ತಿಳಿಸಿದೆ.
ಸ್ವಾಟ್ ಕಣಿವೆಯ ಯಶಸ್ವಿ ಕಾರ್ಯಾಚರಣೆಯಲ್ಲಿ ಮುಸ್ಲಿಂ ಖಾನ್ ಮತ್ತು ತಾಲಿಬಾನ್ ಹಿರಿಯ ಕಮಾಂಡರ್ ಮೆಹ್ಮೂದ್ ಖಾನ್ ಅವರನ್ನು ಕೂಡ ಭದ್ರತಾ ಪಡೆಗಳು ಬಂಧಿಸಿವೆಯೆಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇವರಿಬ್ಬರ ತಲೆಗೆ ತಲಾ ಒಂದು ಕೋಟಿ ರೂ. ಬಹುಮಾನವನ್ನು ಅಧಿಕಾರಿಗಳು ಘೋಷಿಸಿದ್ದರು.ಇನ್ನೂ ಮೂವರು ಉಗ್ರಗಾಮಿಗಳಾದ ಫಝಲ್ ಗಾಫರ್, ಅಬ್ದುಲ್ ರೆಹ್ಮಾನ್ ಮತ್ತು ಸರ್ತಾಜ್ ಅವರನ್ನು ಕೂಡ ಬಂಧಿಸಿರುವುದಾಗಿ ಸೇನೆ ಹೇಳಿದೆ.
ಸ್ವಾಟ್ ಕಣಿವೆಯಲ್ಲಿ ಸೆರೆಹಿಡಿಯಲಾದ ಪ್ರಥಮ ಹಿರಿಯ ತಾಲಿಬಾನ್ ನಾಯಕ ಮುಸ್ಲಿಖಾನ್ ಎಂದು ಹೇಳಲಾಗಿದೆ. ಸ್ವಾಟ್ ಮತ್ತು ಮಲಕಾಂಡ್ ವಿಭಾಗದಲ್ಲಿ ಸುಮಾರು 4 ತಿಂಗಳ ಕಾಲದ ಕಾರ್ಯಾಚರಣೆಯಲ್ಲಿ ಸೇನೆಯು 1800 ಉಗ್ರಗಾಮಿಗಳನ್ನು ಕೊಂದಿದ್ದು, ಸ್ಥಳೀಯ ತಾಲಿಬಾನ್ ಮುಖಂಡ ಮೌಲಾನಾ ಫಜಲುಲ್ಲಾ ಸೇರಿದಂತೆ ಉನ್ನತ ಉಗ್ರಗಾಮಿ ನಾಯಕರು ಸೇನೆಯ ಕೈಯಿಂದ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ.