ಪಾಕಿಸ್ತಾನದಲ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂವಿಧಾನ ಉಲ್ಲಂಘನೆ ಮತ್ತಿತರ ಆರೋಪಗಳ ಮೇಲೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿ ಮಾಡಿದ್ದರೂ ಹಾಜರಾಗದ ಪರ್ವೇಜ್ ಮುಷರಫ್ ಅವರ ಭದ್ರತೆಗೆ ಬ್ರಿಟನ್ ಸರ್ಕಾರ ಪ್ರತಿದಿನ 25,000 ಪೌಂಡ್ ವೆಚ್ಚಮಾಡುತ್ತಿದೆ. ಪ್ರಮುಖ ದಿನಪತ್ರಿಕೆಯೊಂದು ಶುಕ್ರವಾರ ಈ ವಿಷಯವನ್ನು ಬಹಿರಂಗ ಮಾಡಿದೆ.
ನಿವೃತ್ತ ಪಾಕಿಸ್ತಾನಿ ಕಮಾಂಡೊಗಳ ಸಣ್ಣ ತಂಡದಿಂದ ರಕ್ಷಣೆಗೆ ಮಾತ್ರ ಮುಷರಫ್ ಸ್ವತಃ ಹಣ ಪಾವತಿ ಮಾಡುತ್ತಿದ್ದರೂ, ರಾಯಲ್ ಮತ್ತು ವಿಐಪಿಯ ಎಕ್ಸಿಕ್ಯೂಟಿವ್ ಸಮಿತಿಯ ಸಭೆಯಲ್ಲಿ ಮುಷರಫ್ ಅವರಿಗೆ ಹೆಚ್ಚುವರಿ ಭದ್ರತೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಅಧ್ಯಕ್ಷರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಪ್ರಯತ್ನ ನಡೆದರೆ ಅಮಾಯಕ ಜನರು ಬಲಿಯಾಗುತ್ತಾರೆನ್ನುವುದು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರಿಗೆ ಒಂದು ಆತಂಕ. ಇದರಿಂದಾಗಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆಯೆಂದು ಹೇಳಲಾಗಿದೆ.
ಎಸ್‌ಒಐ ಎಂದು ಹೆಸರಿಸಲಾದ ಮೆಟ್ರೋಪಾಲಿಟನ್ ಪೊಲೀಸ್ ಸ್ಪೆಷಲಿಸ್ಟ್ ರಕ್ಷಣಾ ಘಟಕವು ಲಂಡನ್‌ನ ಮೂರು ಬೆಡ್‌ರೂಂ ಫ್ಲಾಟ್‌ನಲ್ಲಿ ವಾಸಿಸುವ ಮಾಜಿ ಜನರಲ್ ಅವರ ರಕ್ಷಣೆಗೆ 10 ಪುರುಷರು ಮತ್ತು ಮಹಿಳೆಯರಿಂದ 24 ಗಂಟೆಗಳ ಕಾಲ ರಕ್ಷಣೆ ಒದಗಿಸಿದೆಯೆಂದು ಟೈಮ್ಸ್ ವರದಿ ಮಾಡಿದೆ.ಆದರೆ ಮುಷರಫ್ ಭದ್ರತೆಗೆ ಸಾರ್ವಜನಿಕ ಹಣವನ್ನು ಬಳಸುವುದು ಎಷ್ಟು ನ್ಯಾಯವೆಂದು ಪಾಕಿಸ್ತಾನ ಮೂಲದ ಸದಸ್ಯ ಲಾರ್ಡ್ ನಜೀರ್ ಅಹ್ಮದ್ ಪ್ರಶ್ನಿಸಿದ್ದಾರೆ.
ಖಾಸಗಿ ಅಂಗರಕ್ಷಕರನ್ನು ಸಾಕುವಷ್ಟು ಶಕ್ತರಾದ ವ್ಯಕ್ತಿಗೆ ರಕ್ಷಣೆ ನೀಡುವ ಬದಲಿಗೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ರಕ್ಷಣೆ ಅಗತ್ಯವಾದ ಜನರು ಬ್ರಿಟನ್‌ನಲ್ಲಿದ್ದಾರೆಂದು ಅವರು ಉದ್ಗರಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಮುಷರಫ್ ಪ್ರಸಕ್ತ ನಿವಾಸವನ್ನು ತಮ್ಮ ನೆಲೆಯಾಗಿ ಮಾಡಿಕೊಂಡಿದ್ದು, ಐಷಾರಾಮಿ ಡಾರ್ಕೆಸ್ಟರ್ ಹೊಟೆಲ್‌ನಲ್ಲಿ ಸಾಮಾನ್ಯವಾಗಿ ಭೋಜನ ಸ್ವೀಕರಿಸುತ್ತಾರೆ.