ಹಗರಣ ಕಳಂಕಿತ ಮಾಜಿ ಅಧ್ಯಕ್ಷ ಚೆನ್ ಶುಯಿ ಬಿಯಾನ್ ಅವರಿಗೆ ತೈವಾನ್ ಕೊರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸ್ಥಳೀಯ ಮಾಧ್ಯಮದಿಂದ ತೈವಾನ್ ಶತಮಾನದ ವಿಚಾರಣೆಯೆಂದೇ ಹೆಸರಾಗಿದ್ದ ವಿಚಾರಣೆಯಲ್ಲಿ ಚೆನ್ ಅವರಿಗೆ 200 ದಶಲಕ್ಷ ತೈವಾನ್ ಡಾಲರ್ ದಂಡವನ್ನು ವಿಧಿಸಲಾಗಿದ್ದು, ಅವರ ನಾಗರಿಕ ಹಕ್ಕುಗಳನ್ನು ಜೀವಮಾನದವರೆಗೆ ಕಿತ್ತುಕೊಳ್ಳಲಾಗಿದೆಯೆಂದು ನ್ಯಾಯಾಧೀಶ ಸಾಯಿ ಶೌ ಸಿನ್ ತೀರ್ಪು ನೀಡಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರಿ ರಾಜಕಾರಣಿಗಳು ಕಾನೂನಿನ ಮುಷ್ಠಿಯಿಂದ ಸುಲಭವಾಗಿ ನುಣುಚಿಕೊಳ್ಳುತ್ತಿರುವ ನಡುವೆ ತೈವಾನ್ ದೇಶದ ಮಾಜಿ ಅಧ್ಯಕ್ಷರಿಗೇ ಭ್ರಷ್ಟಾಚಾರದ ಆರೋಪಗಳ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದ ಪ್ರಕರಣ ಆದರ್ಶಪ್ರಾಯವೆನಿಸಿದೆ. 58 ವರ್ಷ ವಯಸ್ಸಿನ ಚೆನ್ 2000ದಿಂದ 2008ರ ನಡುವೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ತೈಪಿ ಬಂಧನ ಕೇಂದ್ರದಲ್ಲಿ ಕಳೆದ ಡಿಸೆಂಬರ್‌ನಿಂದ ಅವರನ್ನು ಬಂಧಿಸಲಾಗಿದೆ.
ಅವ್ಯವಹಾರ ಮತ್ತು 14 ದಶಲಕ್ಷ ಡಾಲರ್ ಲಂಚ ಸ್ವೀಕಾರ ಮತ್ತು 2.97 ದಶಲಕ್ಷ ಡಾಲರ್ ಹಣ ದುರ್ಬಳಕೆ, ಸುಲಿಗೆ, ದಾಖಲೆ ನಕಲು ಮುಂತಾದ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.