ಟೊರಂಟೊದ ಹೊರವಲಯದಲ್ಲಿ ಭಾರತೀಯರ ಪ್ರಾಬಲ್ಯದ ಬ್ರಾಮ್ಟನ್ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಸಿಖ್ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತುರ್ತು ಕರೆಗೆ ಸ್ಪಂದಿಸಿದ ಸ್ಥಳೀಯ ಪೊಲೀಸರು ನಸುಕಿನಲ್ಲಿ 4.20ಕ್ಕೆ 33 ವರ್ಷ ವಯಸ್ಸಿನ ದೇವಿಂದರ್ ಸಿಂಗ್ ಗಿಲ್ ಅವರಿಗೆ ಗುಂಡೇಟು ತಗುಲಿ ತೀವ್ರ ಗಾಯಗೊಂಡಿದ್ದನ್ನು ಪತ್ತೆಮಾಡಿದರು.
ಗಿಲ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ತೀವ್ರ ಗಾಯಗಳಿಂದ ಮೃತಪಟ್ಟರು. ಗಿಲ್ ಅವರಿಗೆ ಗುಂಡಿಕ್ಕಲಾದ ಮನೆ ಅವರಿಗೆ ಸೇರಿದ್ದೇ ಅಥವಾ ಬೇರೆಯವರದ್ದೇ ಎಂಬ ಕುರಿತು ಪೊಲೀಸರು ಸ್ಪಷ್ಟಪಡಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಅಪರಾಧದ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರವೂ ಪತ್ತೆಯಾಗಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ.
ಮನೆಯೊಂದರಲ್ಲಿ ಜನರು ಗುಂಪು ಸೇರಿದ್ದಾಗ ಮಾತಿನಚಕಮಕಿ ನಡೆದ ಬಳಿಕ ಗುಂಡು ಹಾರಿಸಲಾಗಿದೆ. ಆದರೆ ಪೊಲೀಸರು ಈ ಘಟನೆಯನ್ನು ದೃಢಪಡಿಸಿಲ್ಲ. ನಮ್ಮ ಬಳಿ ಶಂಕಿತರ ವಿವರವಿಲ್ಲ. ನಾವು ಎಷ್ಟು ಜನರಿಗಾಗಿ ಹುಡುಕುತ್ತಿದ್ದೇವೆಂಬ ಖಚಿತತೆಯೂ ಇಲ್ಲವೆಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಕೆನಡಾದ ವೇಗವಾಗಿ ಬೆಳೆಯುತ್ತಿರುವ ನಗರವಾದ ಬ್ರಾಂಪ್ಟನ್‌ನಲ್ಲಿ ಪಂಜಾಬ್ ಸಮುದಾಯದ ಅಪಾರ ಜನರು ಉಪಸ್ಥಿತರಿದ್ದು, ಟೊರಂಟೊ ಪ್ರದೇಶದ ಮೂವರು ಸಿಖ್ ಸಂಸದರಾದ ರುಬಿ ಧಲ್ಲಾ, ಗುರ್ಬಾಕ್ಸ್ ಮಾಲಿ ಮತ್ತು ನವದೀಪ್ ಬೇನ್ಸ್ ಬ್ರಾಂಪ್ಟನ್ ನಿವಾಸಿಗಳಾಗಿದ್ದಾರೆ.