ವಾಶಿಂಗ್ಟನ್, ಸೋಮವಾರ, 14 ಸೆಪ್ಟೆಂಬರ್ 2009( 11:48 IST )
ಉಗ್ರಗಾಮಿ ಸಂಘಟನೆ ಅಲ್-ಖೈದಾದ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಅಮೆರಿಕ ಪ್ರಜೆಗಳನ್ನುದ್ದೇಶಿಸಿ ಮಾಡಿದ್ದಾನೆನ್ನಲಾಗಿರುವ ಆಡಿಯೋ ಟೇಪ್ ಅನ್ನು ಉಗ್ರಗಾಮಿ ಜಾಲದ ಮಾಧ್ಯಮ ಶಾಖೆಯು ಬಿಡುಗಡೆ ಮಾಡಿದೆ ಎಂಬುದಾಗಿ ಅಮೆರಿಕ ಮೂಲದ ಉಗ್ರಗಾಮಿ ವೀಕ್ಷಣಾ ಸಮೂಹವು ಭಾನುವಾರ ಹೇಳಿದೆ.
ಅಲ್-ಖೈದಾದ ಆಸ್-ಸಹಬ್ ಮಾಧ್ಯಮವು ಈ ಆಡಿಯೋ ಟೇಪನ್ನು ಒಸಮಾನ ಸ್ಟಿಲ್ ಚಿತ್ರದೊಂದಿಗೆ ಬಿಡುಗಡೆ ಮಾಡಿದೆ ಎಂಬುದಾಗಿ ಇಂಟೆಲ್ ಸೆಂಟರ್ ಹೇಳಿದ್ದು, ಇದರಲ್ಲಿ ಉಪ ಶೀರ್ಷಿಕೆಗಳಾಗಲಿ ಅಥವಾ ಇತರ ಯಾವುದೇ ಲಿಪಿಗಳು ಲಭ್ಯವಿಲ್ಲ ಎಂದು ಹೇಳಿದೆ. ಆಡಿಯೋದೊಂದಿಗೆ ವೀಡಿಯೋ ತುಣುಕುಗಳು ಇರಲಿಲ್ಲ. ಬರಿಯ ಆತನ ಚಿತ್ರವನ್ನು ಮಾತ್ರ ತೋರಿಸಲಾಗಿದೆ ಎಂದು ಅದು ಹೇಳಿದೆ
ಒಸಮಾ ತನ್ನ ಸಂದೇಶದಲ್ಲಿ ಅಮೆರಿಕವು ಇಸ್ರೇಲ್‌ಗೆ ನೆರವು ನೀಡಿರುವುದು ಅಮೆರಿಕದ ಮೇಲೆ ನಡೆಸಿರುವ ದಾಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾನೆ. ಇದರಲ್ಲದೆ ಅಮೆರಿಕದ ಇನ್ನು ಕೆಲವು ಅನ್ಯಾಯಗಳೂ 9/11ಗೆ ಕಾರಣಾಗಿದೆ ಎಂದು ಟೇಪಿನಲ್ಲಿ ಹೇಳಲಾಗಿದೆ ಎಂದು ಕೇಂದ್ರವು ಹೇಳಿದೆ.
"ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧಗಳಿಗೆ ಶ್ವೇತಭವನದಲ್ಲಿನ ಇಸ್ರೇಲಿ ಪರ ಲಾಬಿ ಹಾಗೂ ಕಾರ್ಪೋರೇಟ್ ಆಸಕ್ತಿಯೇ ಕಾರಣ ವಿನಹ ಇಸ್ಲಾಮಿಕ್ ಉಗ್ರರು ಕಾರಣರಲ್ಲ. ನೀವು ನಿಮ್ಮ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡರೆ, ಶ್ವೇತಭವನವನ್ನು ಒತ್ತಡ ಹೇರುವ ಸಮೂಹ ಆಕ್ರಮಿಸಿಕೊಂಡಿದೆ ಎಂಬುದು ನಿಮಗೆ ತಿಳಿಯುತ್ತದೆ. ಬುಶ್ ಹೇಳಿದಂತೆ ಸ್ವತಂತ್ರ ಇರಾಕ್‌ಗಾಗಿ ಹೋರಾಡುವ ಬದಲಿಗೆ ಅದನ್ನು ಮುಕ್ತವಾಗಿಸಬಹುದಿತ್ತು" ಎಂದು ಟೇಪಿನಲ್ಲಿ ಹೇಳಲಾಗಿದೆ.
ಅಮೆರಿಕವು ಅಲ್-ಖೈದಾ ಪ್ರಾಯೋಜಿತ 2001ರ ಸೆಪ್ಟೆಂಬರ್ 11ರ ದುರಂತಕ್ಕೆ ಎಂಟು ವರ್ಷ ಸಂದ ಸಂದರ್ಭದಲ್ಲಿ ದುರ್ಘಟನೆಯ ಸ್ಮರಣೆ ಮಾಡಿರುವ ಎರಡುದಿನಗಳ ಬಳಿಕ ಈ ಆಡಿಯೋ ಟೇಪ್ ಹೊರಬಿದ್ದಿದೆ. ಈ ದಾಳಿಯಲ್ಲಿ ಅಮೆರಿಕದ ಮೂರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.