ಇಸ್ಲಾಮಾಬಾದ್, ಸೋಮವಾರ, 14 ಸೆಪ್ಟೆಂಬರ್ 2009( 12:36 IST )
ಕಳೆದ ವರ್ಷ ಪಾಕ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಮುಷ್ರಫ್, ಗಡೀ ಪಾರು ಶಿಕ್ಷೆಯಿಂದ ಪಾರಾಗಲು ಸರಕಾರದೊಂದಿಗೆ ಅಥವಾ ರಾಷ್ಟ್ರ್ರೀಯ ಪಕ್ಷಗಳೊಂದಿಗೆ ಯಾವುದೇ ರೀತಿಯ ರಾಜೀ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಮಾಜಿ ರಾಷ್ಟ್ರಾಧ್ಯಕ್ಷ ಜನರಲ್ ಪರ್ವೇಜ್ ಮುಷ್ರಫ್ ಅವರ ಅಧಿಕಾರವಧಿಯಲ್ಲಿ ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ , ಸರ್ವಾಧಿಕಾರಿ ಧೋರಣೆಯಿಂದಾಗಿ ಪಾಕಿಸ್ತಾನದ ಸರಕಾರ ಗಡೀ ಪಾರು ಮಾಡುವ ಚಿಂತನೆಯಲ್ಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಖಾಸಗಿ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಹಾಗೂ ಭಾರತಕ್ಕೆ ಆಘಾತವಾಗುವ ಕೆಲ ಮಾಹಿತಿಗಳನ್ನು ಬಹಿರಂಗಪಡಿಸಿರುವುದರಿಂದ ಅಕ್ರೋಶಗೊಂಡ ಜರ್ದಾರಿ ಮುಷ್ರಫ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ..
ಭಯೋತ್ಪಾದಕರ ವಿರುದ್ಧ ಹೋರಾಡಲು ಅಮೆರಿಕ ನೀಡಿದ ಆರ್ಥಿಕ ನೆರವನ್ನು ಭಾರತದ ವಿರುದ್ಧ ಪಾಕಿಸ್ತಾನ ಸೇನೆಯನ್ನು ಬಲಿಷ್ಟಗೊಳಿಸಲು ಬಳಸಿರುವುದು ನಿಜ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೆಜ್ ಮುಷರಫ್ ಮೊದಲ ಬಾರಿಗೆ ತಪ್ಪೊಪ್ಪಿಕೊಂಡಿದ್ದರು.
ಅಮೆರಿಕ ನೀಡಿದ ಆರ್ಥಿಕ ,ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳನ್ನು, ಭಾರತದ ವಿರುದ್ಧ ಹಗೆಯನ್ನು ಸಾಧಿಸಲು ಪಾಕ್ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಂಸತ್ತು ಹಾಗೂ ಭಾರತ ಇತ್ತೀಚಿನವರೆಗೆ ಆರೋಪಿಸುತ್ತಾ ಬಂದಿವೆ.
ನಾನು ಸತ್ಯ ಸಂಗತಿಯನ್ನು ಬಹಿರಂಗಪಡಿಸಿದ್ದು,ಅಮೆರಿಕ ಅಕ್ರೋಶಗೊಂಡರೂ ಅಡ್ಡಿಯಿಲ್ಲ. ಅಮೆರಿಕ ನೀಡಿದ ಆರ್ಥಿಕ ನೆರವನ್ನು ಪಾಕ್ ಸೇನೆಯ ಬಲವರ್ಧನೆಗಾಗಿ ಬಳಸಿಕೊಳ್ಳಲಾಗಿತ್ತು. ಪಾಕಿಸ್ತಾನದ ಹಿತದೃಷ್ಟಿಯನ್ನು ಕಾಪಾಡಲು ಇದು ಅಗತ್ಯವಾಗಿತ್ತು ಎಂದು ಬಹಿರಂಗಪಡಿಸಿದ್ದರು.
ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕ್ ಅಮೆರಿಕಕ್ಕೆ ನೆರವು ನೀಡದಿದ್ದಲ್ಲಿ, ಅಮೆರಿಕ ಸೇನಾಪಡೆಗಳು ಪಾಕ್‌ನ ಅಣ್ವಸ್ತ್ರಗಳನ್ನು ದಾಳಿ ಮಾಡಿ ವಶಪಡಿಸಿಕೊಳ್ಳುವ ಸಾಧ್ಯತೆಗಳಿದ್ದವು ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಹೇಳಿದ್ದಾರೆ.