ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮೇಲೆ ಬೂಟು ಎಸೆದ ಇರಾಕ್‌ನ ಟೆಲಿವಿಷನ್ ಪತ್ರಕರ್ತ ಮುಂತಾಝರ್ ಅಲ್ ಜೈದಿ ಮಂಗಳವಾರ ಬಿಡುಗಡೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜೈದಿಯ ಸಹೋದರ ರ್ದುಗಾಮ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾನೂನು ಪ್ರಕ್ರಿಯೆ ಸಂಪೂರ್ಣವಾಗಿ ಕೊನೆಗೊಳ್ಳದ ಹಿನ್ನೆಲೆಯಲ್ಲಿ ಆತನ ಬಿಡುಗಡೆಗಾಗಿ ಮತ್ತೂ ಒಂದು ದಿನ ಕಾಯಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 'ಇಂದು ತನ್ನನ್ನು ಬಿಡುಗಡೆ ಮಾಡುತ್ತಿಲ್ಲ, ನಾಳೆ ಬಂಧಮುಕ್ತಗೊಳಿಸಲಿದ್ದಾರೆ ಎಂದು ಜೈದಿ ತಿಳಿಸಿದ್ದಾರೆ' ಎಂಬುದಾಗಿ ರ್ದುಗಾಮ್ ವಿವರಿಸಿದ್ದಾರೆ.
ಜಾರ್ಜ್ ಡಬ್ಲ್ಯು ಬುಷ್ ಮೇಲೆ ಬೂಟುಗಳನ್ನು ಎಸೆದು ದಿಢೀರ್ ಮನೆಮಾತಾದ ಇರಾಕಿ ಪತ್ರಕರ್ತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಾರುಗಳು, ಮನೆಗಳು ಅವರಿಗಾಗಿ ಕಾದಿದ್ದು, ಪತ್ನಿಯೊಬ್ಬರು ಕೂಡ ಅವರಿಗೆ ಕಾದುಕೊಂಡಿದ್ದಾರೆ.
'ಇದೊಂದು ವಿದಾಯದ ಮುತ್ತು, ಎಲೆ ನಾಯಿ, ಇದು ಇರಾಕಿನ ವಿಧವೆಯರು ಮತ್ತು ಅನಾಥರಿಗಾಗಿ' ಎಂದು ಬಾಗ್ದಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರತ್ತ ಬೂಟುಗಳನ್ನು ಎಸೆಯುತ್ತಾ ಪತ್ರಕರ್ತ ಮುಂತಾಝರ್ ಅಲ್ ಜೈದಿ ಉದ್ಗರಿಸಿದ್ದರು.
ಬಿಡುಗಡೆಗೂ ಮುನ್ನ ಜೈದಿಗೆ ಬಹುಮಾನಗಳ ಸುರಿಮಳೆ: ಇರಾಕ್ ಅಧ್ಯಕ್ಷರು ಕ್ಷಮೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಸೋಮವಾರ ಜೈದಿಯ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದಕ್ಕೂ ಮುನ್ನ ಅರಬ್ ಜಗತ್ತಿನ ಮಿಲಿಯಾಂತರ ಜನರ ಅಭಿಮಾನ, ಗೌರವಗಳಿಗೆ ಪಾತ್ರರಾದ ಜೈದಿಯ ಮಾಲೀಕರಾದ ಅಲ್ ಬಗ್ದಾದಿಯ ಟಿವಿ ಚಾನೆಲ್‌ಗೆ ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ಬಾಸ್ ಜೈದಿಗೆ ನಾಲ್ಕು ಕೋಣೆಗಳ ನಿವಾಸವನ್ನು ಕಟ್ಟಿಸಿಕೊಟ್ಟಿದ್ದಾರೆ. ಹೊಸ ಕಾರು, ಇನ್ನೂ ಅನೇಕ ಭರವಸೆಗಳ ಮಹಾಪೂರವೇ ಜೈದಿಗೆ ಕಾದುಕೊಂಡಿವೆ.
ಮೊರಕ್ಕೊನಲ್ಲಿ ವಾಸಿಸುವ ಇರಾಕಿಯೊಬ್ಬ ಜೈದಿಯ ಪತ್ನಿಯಾಗಿ ತಮ್ಮ ಪುತ್ರಿಯನ್ನು ಕಳಿಸಲು ನಿರ್ಧರಿಸಿದ್ದಾರೆ. ಇನ್ನೊಬ್ಬರು ಸೌದಿಯಿಂದ ಕರೆ ಮಾಡಿ ಜೈದಿಯ ಬೂಟುಗಳಿಗೆ 10 ದಶಲಕ್ಷ ಡಾಲರ್ ನೀಡುವುದಾಗಿ ಪ್ರಸ್ತಾಪ ಮಂಡಿಸಿದ್ದಾರೆ. ಇನ್ನೊಬ್ಬ ಮೊರೊಕ್ಕೊದಿಂದ ಕರೆ ಮಾಡಿ ಚಿನ್ನದ ಜೀನಿನ ಕುದುರೆಯನ್ನು ನೀಡುವ ಪ್ರಸ್ತಾಪ ಮಾಡಿದ್ದಾನೆ.
'ಈ ಘಟನೆಯ ಬಳಿಕ ಪ್ಯಾಲೆಸ್ತೇನ್ ಮತ್ತಿತರ ಕಡೆಗಳಿಂದ ಅನೇಕ ಮಹಿಳೆಯರು ಜೈದಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಅವರಲ್ಲಿ ಬಹುತೇಕ ಮಂದಿಯ ಪ್ರತಿಕ್ರಿಯೆಗಳು ಭಾವನಾತ್ಮಕವಾಗಿದ್ದು, ಜೈದಿ ಬಿಡುಗಡೆಯಾದ ಬಳಿಕ ಏನಾಗುತ್ತದೆಂದು ನೋಡೋಣ' ಎಂದು ಸಂಪಾದಕ ಅಬ್ದುಲ್ ಹಮೀದ್ ಅಲ್‌ಸೈಜ್ ತಿಳಿಸಿದ್ದಾರೆ.
ಇರಾಕಿನಲ್ಲಿ ಅಮೆರಿಕದ ಯುದ್ಧದಿಂದ ಅನೇಕ ಮಹಿಳೆಯರು ಪತಿಯನ್ನು ಕಳೆದುಕೊಂಡ ವಿಧವೆಯಾಗಿ, ಅನೇಕ ಮಕ್ಕಳು ಅನಾಥರಾಗಿರುವ ನಡುವೆ ಬುಷ್ ಮೇಲೆ ಬೂಟೆಸೆತದಿಂದ ಜೈದಿ ಮಿಲಿಯಾಂತರ ಮುಸ್ಲಿಮರ ಕಣ್ಮಣಿಯಾಗಿದ್ದಾರೆ.