ರಂಜಾನ್ ಸಲುವಾಗಿ ನೀಡಲಾಗುತ್ತಿದ್ದ ದಾನ ಸ್ವೀಕಾರಕ್ಕೆ ತೆರಳಿದ್ದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ಕನಿಷ್ಠ 18 ಮಹಿಳೆಯರು ಹಾಗೂ ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಪಾಕಿಸ್ತಾನದ ಹಣಕಾಸು ರಾಜಧಾನಿ ಕರಾಚಿಯಲ್ಲಿ ಸೋಮವಾರ ಸಂಭವಿಸಿದೆ. ಇದರೊಂದಿಗೆ ಇತರ ಅನೇಕರು ಗಾಯಗೊಂಡಿದ್ದಾರೆ.
ಕೋರಿಗಾರ್ಡನ್‌ನ ಅತ್ಯಂತ ಇಕ್ಕಟ್ಟಾದ ಜಾಗದಲ್ಲಿ ಚಾರಿಟಿ ಸಂಸ್ಥೆಯೊಂದು ರಂಜಾನ್ ಸಲುವಾಗಿ ಉಚಿತ ಹಿಟ್ಟು ವಿತರಣೆ ನಡೆಸುತ್ತಿದ್ದು, ಇದನ್ನು ಪಡೆಯಲು ನೂರಾರು ಹೆಂಗಸರು ಮತ್ತು ಮಕ್ಕಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಹಾಗೂ ಉಸಿರುಕಟ್ಟಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದಾಗಿ ಕರಾಚಿ ಸಿಟಿ ಪೊಲೀಸ್ ಮುಖ್ಯಸ್ಥ ವಾಸಿಮ್ ಅಹ್ಮದ್ ವರದಿಗಾರರಿಗೆ ತಿಳಿಸಿದ್ದಾರೆ.
ಮುಸ್ಲಿಂ ರಾಷ್ಟ್ರ ಪಾಕಿಸ್ತಾನದಲ್ಲಿ ರಂಜಾನ್ ಆಚರಿಸಲಾಗುತ್ತಿದ್ದು, ಈ ಪವಿತ್ರ ತಿಂಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಉಪವಾಸ ಆಚರಣೆ ಮಾಡಲಾಗುತ್ತಿದೆ. ಚೌಧುರಿ ಇಫ್ತಿಕಾರ್ ಎಂಬವರು ಈ ದಾನಕಾರ್ಯಕ್ಕೆ ಮುಂದಾಗಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಕಾಲ್ತುಳಿತಕ್ಕೆ ತಕ್ಷಣಕ್ಕೆ ಕಾರಣ ತಿಳಿದು ಬಂದಿಲ್ಲ.