ಕಾಠ್ಮಂಡು , ಸೋಮವಾರ, 14 ಸೆಪ್ಟೆಂಬರ್ 2009( 20:02 IST )
ನೇಪಾಳದ ಪ್ರಧಾನಿ ಮಾಧವಕುಮಾರ್ ನೇಪಾಳ ಅವರನ್ನು ಸಭೆಗೆ ಹೋಗದಂತೆ ಒತ್ತಾಯಿಸಿ ಮಾವೋವಾದಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 12 ಮಂದಿ ನಾಗರಿಕರು ಸೇರಿದಂತೆ ಪೊಲೀಸರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ನೇಪಾಳದಲ್ಲಿರುವ ಬಿರಾಟ್‌ನಗರ್‌ಗೆ ಪ್ರಧಾನಿ ಭೇಟಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಪ್ಪು ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ ,ಸಭೆ ನಡೆಯುವ ಸ್ಥಳಕ್ಕೆ ಪ್ರಧಾನಿ ಬಿಗಿಭಧ್ರತೆಯ ಮಧ್ಯೆ ಆಗಮಿಸಿದಾಗ, ಅಲ್ಲಿದ್ದ ಮಾವೋವಾದಿಯೊಬ್ಬ ಪ್ರತಿಭಟನೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕಾಠ್ಮಂಡುವಿನ ಶಿಫಾಲ್ ಪ್ರದೇಶದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ಉಪಪ್ರಧಾನಿ ಬಿಜಯ್ ಕುಮಾರ್ ಗಚ್ಚಾದರ್ ಅವರ ವಿರುದ್ಧ ಮಾವೋವಾದಿಗಳು ಘೋಷಣೆ ಕೂಗಿ ಸಮಾರಂಭವನ್ನು ಬಹಿಷ್ಕರಿಸಿದರು.