ಇಸ್ಲಾಮಾಬಾದ್, ಮಂಗಳವಾರ, 15 ಸೆಪ್ಟೆಂಬರ್ 2009( 08:57 IST )
ಭಾರತದೊಂದಿಗೆ ನಡೆಸಿದ ಯುದ್ಧಗಳಿಂದ ಪಾಕಿಸ್ತಾನ ಸಾಧಿಸಿದ್ದೂ ಏನೂ ಇಲ್ಲ ಎಂದಿರುವ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ ಮಹಮೂದ್ ಅಲಿ ದುರಾನಿ, ಯುದ್ಧದ ಹಾದಿ ತೊರೆದು ಬಾಕಿ ಇರುವ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತದೊಂದಿಗೆ ಸ್ನೇಹದ ಹಸ್ತಚಾಚಬೇಕು ಎಂದು ಸಲಹೆ ಮಾಡಿದ್ದಾರೆ.
"ಭಾರತದ ವಿರುದ್ಧ ನಡೆದ ಎರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಈ ಯುದ್ಧಗಳಿಂದ ಪಾಕಿಸ್ತಾನ ಏನನ್ನು ಸಾಧಿಸಲಿಲ್ಲ ಎಂಬುದು ನನಗೀಗ ಅರಿವಾಗುತ್ತಿದೆನಾವು ಭಾರತಕ್ಕೆ ಸ್ನೇಹ ಹಸ್ತವನ್ನು ಚಾಚಿವ ಮೂಲಕ ವಿವಾದಗಳನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು" ಎಂದವರು ಹೇಳಿದ್ದಾರೆ.
ಮುಂಬೈ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿದ್ದ ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದ ಪ್ರಜೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸೂಫ್ ರಜಾ ಗಿಲಾನಿ ದುರಾನಿ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ವಜಾ ಮಾಡಿದ್ದರು.
1965ರಲ್ಲಿ ಪಾಕ್ ಸೇನೆಯು ನಡೆಸಿದ ಸಣ್ಣ ಕಾದಾಟವು ಭಾರತ ಸೇನೆಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಪ್ರಚೋದನೆ ನೀಡಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಗಡಿಯಲ್ಲಿ ಪಾಕ್ ಸೇನೆಯನ್ನು ಬಲವಂತವಾಗಿ ಹೇರಲಾಗಿತ್ತು. ಆಗ ಭಾರತದ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪಾಕ್ ಸೇನೆಯು ಗಡಿಯಲ್ಲಿ ನಡೆಸುತ್ತಿದ್ದ ಸಣ್ಣ, ಸಣ್ಣ ಕಾದಾಟದ ಕಾರಣ ಭಾರತದ ಸೇನೆ ಪ್ರತಿಕ್ರಿಯಿಸಲೇ ಬೇಕಾಯಿತು ಎಂದು ಮಹಮೂದ್ ಅಲಿ ದುರಾನಿ ಅಭಿಪ್ರಾಯಿಸಿದ್ದಾರೆ.