ವಾಷಿಂಗ್ಟನ್, ಮಂಗಳವಾರ, 15 ಸೆಪ್ಟೆಂಬರ್ 2009( 13:36 IST )
ಅಮೆರಿಕ ನೀಡಿದ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ನೆರವನ್ನು ಭಾರತದ ವಿರುದ್ಧ ಬಳಸಲಾಗಿದೆ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಅವರ ಹೇಳಿಕೆ ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಅಮೆರಿಕ ನೀಡಿದ ನೆರವನ್ನು ಭಾರತದ ವಿರುದ್ಧ ಬಳಸಲಾಗಿದೆ ಎನ್ನುವ ಮಾಹಿತಿ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಪರ್ವೇಜ್ ಮುಷ್ರಫ್ ಹೇಳಿಕೆಗಳು ನಿಖರವಾಗಿಲ್ಲವೆಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಮುಷ್ರಫ್ ಹೇಳಿಕೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಪ್ರತಿಕ್ರಿಯೆ ನೀಡಲು ನಮ್ಮ ಬಳಿ ವಿವರಗಳು ಲಭ್ಯವಿಲ್ಲ ಎಂದು ಅಮೆರಿಕದ ವಕ್ತಾರರಾದ ಇಯಾನ್ ಕೆಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಹಿತಾಸಕ್ತಿಯನ್ನು ರಕ್ಷಿಸಲು ಅಮೆರಿಕ ನೀಡಿದ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ನೆರವನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಅಧಿಕಾರದ ದುರುಪಯೋಗ ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮುಷ್ರಫ್ ಹೇಳಿಕೆ ನೀಡಿದ್ದರು.
ಪ್ರಸ್ತುತ ಮುಷ್ರಫ್ ಸಾಮಾನ್ಯ ನಾಗರಿಕರಾಗಿದ್ದರಿಂದ, ಕೆಲ ವಿವರಗಳನ್ನು ಮಾತ್ರ ನೀಡಿದ್ದಾರೆ. ಆದ್ದರಿಂದ ಮತ್ತಷ್ಟು ವಿವರಣೆಗಳನ್ನು ನೀಡಿದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ಅಮೆರಿಕದ ವಕ್ತಾರ ಕೆಲ್ಲಿ ಹೇಳಿದ್ದಾರೆ.