ಮೆಲ್ಬೋರ್ನ್, ಮಂಗಳವಾರ, 15 ಸೆಪ್ಟೆಂಬರ್ 2009( 15:30 IST )
ಭಾರತೀಯರ ಮೇಲೆ ಸತತವಾಗಿ ಜನಾಂಗೀಯ ದಾಳಿ ನಡೆಯುವ ಮೂಲಕ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದ ಆಸ್ಟ್ರೇಲಿಯಾದಲ್ಲಿ ಇದೀಗ ಮತ್ತೆ ಮೂವರು ಭಾರತೀಯರ ಮೇಲೆ 70ಜನರ ಗುಂಪೊಂದು ಜನಾಂಗೀಯ ದಾಳಿ ನಡೆಸಿದ ಘಟನೆ ನಡೆದಿದೆ.
ಮೆಲ್ಬೋರ್ನ್‌ನ ಎಪ್ಪಿಂಗ್ ಎಂಬಲ್ಲಿ ಶನಿವಾರ 26ರ ಹರೆಯದ ಸುಖ್‌ದೀಪ್ ಸಿಂಗ್, ಆತನ ಸಹೋದರ ಗುರ್‌ದೀಪ್ ಸಿಂಗ್ ಹಾಗೂ ಚಿಕ್ಕಪ್ಪ ಮುಕ್ತಿಯಾರ್ ಸಿಂಗ್ ಅವರು ಬಿಲಿಯರ್ಡ್ಸ್ ಆಟವಾಡುತ್ತಿದ್ದ ವೇಳೆ ಏಕಾಏಕಿ 70ಜನರ ಗುಂಪೊಂದು ದಾಳಿ ನಡೆಸಿ ಥಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 11ಗಂಟೆ ಸುಮಾರಿಗೆ ಸುಖ್‌ದೀಪ್ ಕುಟುಂಬ ವರ್ಗದವರೊಂದಿಗೆ ಬಿಲಿಯರ್ಡ್ಸ್ ಆಟವಾಡುತ್ತಿದ್ದ ವೇಳೆ ಪಾರ್ಟಿಯೊಂದಕ್ಕೆ ಆಗಮಿಸಿದ್ದ ಸ್ಥಳೀಯರ ಸುಮಾರು 70ಮಂದಿ ಗುಂಪು ಈ ದಾಳಿ ನಡೆಸಿರುವುದಾಗಿ ದಾಳಿಗೊಳಗಾದ ಸಂಬಂಧಿ ಓಂಕಾರ್ ಸಿಂಗ್ ವಿವರಿಸಿದ್ದಾರೆ.
ಆಟವಾಡುತ್ತಿದ್ದ ವೇಳೆ ಅನಾವಶ್ಯಕವಾಗಿ ಜನಾಂಗೀಯ ನಿಂದನೆ ಬೈಗುಳಗಳನ್ನು ಹೇಳಿ ಜಗಳ ಮಾಡಬೇಕೆಂತಲೇ ಪರಿಸ್ಥಿತಿಯನ್ನು ವಿಕೋಪ ಹೋಗಿಸಲು ಯತ್ನಿಸುತ್ತಿದ್ದರು. ಆದರೆ ನಾವು ಆದಷ್ಟು ಸಮಾಧಾನದಿಂದ ಇದ್ದಾಗ ಗುಂಪು ಏಕಾಏಕಿ ದಾಳಿ ನಡೆಸಿರುವುದಾಗಿ ಅವರು ಹೇಳಿದರು.
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಡೆಯುತ್ತಿರುವ ಬಗ್ಗೆ ಭಾರತ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಸಾಕಷ್ಟು ಪ್ರತಿಭಟನೆ ಕೂಡ ನಡೆದಿತ್ತು. ಆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಇತ್ತೀಚೆಗೆ ಆಸೀಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯರಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಭರವಸೆಯ ನಂತರ ಭಾರತೀಯರ ಮೇಲೆ ಮತ್ತೆ ದಾಳಿ ನಡೆದಿದೆ.