ಭಾರತೀಯ ಮೂಲದ ಅರ್ಚಕರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ಭರವಸೆಯನ್ನು ನೇಪಾಳ ಸರ್ಕಾರ ನೀಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹೇಳಿದ್ದಾರೆ. ನಿರುಪಮಾ ಅವರು ತಮ್ಮ ನೇಪಾಳ ಪ್ರವಾಸದ ವೇಳೆ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿದರು.
ಭಾರತೀಯ ಮೂಲದ ಅರ್ಚಕರ ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಾವೋವಾದಿಗಳು 15 ದಿನಗಳ ಹಿಂದೆ ಅರ್ಚಕರ ಮೇಲೆ ಹಲ್ಲೆ ನಡೆಸಿದ್ದರು. ಈ ಅರ್ಚಕರಿಗೆ ಪೂರ್ಣ ರಕ್ಷಣೆ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಮಗೆ ನೇಪಾಳ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.
ನೇಪಾಳದಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವ ಗಟ್ಟಿಯಾಗುವುದನ್ನು ಬಯಸಿರುವುದಾಗಿ ಹೇಳಿರುವ ಭಾರತ, ಆ ದೇಶದಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳನ್ನು ಜಾರಿಗೆ ತರಲು ಉತ್ಸುಕವಾಗಿದೆ ಎಂದು ಅವರು ಹೇಳಿದ್ದಾರೆ. ನೇಪಾಳ ಪ್ರಧಾನಿ ಮಾಧವ ಕುಮಾರ್ ನೇಪಾಳ್ ಅವರನ್ನು ಭೇಟಿ ಮಾಡಿದ ಬಳಿಕ ವಿದೇಶಾಂಗ ಕಾರ್ಯದರ್ಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.