ಭಾರತೀಯರು ಕಾನೂನು ಕೈಗೆತ್ತಿಕೊಂಡ್ರೆ ಎಚ್ಚರ: ಆಸ್ಟ್ರೇಲಿಯಾ
ಸಿಡ್ನಿ, ಗುರುವಾರ, 17 ಸೆಪ್ಟೆಂಬರ್ 2009( 12:23 IST )
'ಜನಾಂಗೀಯ ದಾಳಿಗೆ ಪ್ರತಿಕಾರ ಎಂಬಂತೆ ಭಾರತೀಯ ವಿದ್ಯಾರ್ಥಿಗಳು ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ' ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರುಡ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಮುಂದುವರಿದಿದ್ದು, ಇತ್ತೀಚೆಗಷ್ಟೇ ಮೆಲ್ಬೊರ್ನ್‌ನಲ್ಲಿ ಮೂವರು ಭಾರತೀಯರ ಮೇಲೆ ಹಲ್ಲೆ ನಡೆದ ಘಟನೆ ಕುರಿತಂತೆ ಲೇಖಕ ಫಾರ್ರುಕ್ ಧೋಂಡಿ ಅವರು, ಭಾರತೀಯರು ತಮ್ಮ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಕಾರವಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದ್ದರು.
ಅವರ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನಿ ರುಡ್, ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ರಾಷ್ಟ್ರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಆ ಕೆಲಸವನ್ನು ನಾವೇ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಶನಿವಾರ ಎಪ್ಪಿಂಗ್ ಎಂಬಲ್ಲಿ ಮೂವರು ಭಾರತೀಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, 'ನೀವು ಭಾರತೀಯರು, ನೀವು ನಿಮ್ಮ ದೇಶಕ್ಕೆ ವಾಪಸಾಗಿ'ಎಂದು ಚುಚ್ಚಿ ಮಾತನಾಡಿದ್ದರು. ಅಲ್ಲದೇ ಆಸ್ಟ್ರೇಲಿಯಾದಲ್ಲಿ ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಭಾರತ ಮನವಿ ಮಾಡಿಕೊಂಡಿದೆ.