ಅಫಘಾನಿಸ್ತಾನದ ಕಾಬೂಲ್‌ನ ಅಮೆರಿಕದ ರಾಯಭಾರಿ ಕಚೇರಿ ಬಳಿ ವಿದೇಶಿ ಸೇನಾಪಡೆಗಳು ಪ್ರಯಾಣುಸುತ್ತಿದ್ದ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದಾಗಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಆತ್ಮಾಹುತಿ ದಳದ ಸದಸ್ಯ, ನ್ಯಾಟೋ ಸೇನಾಪಡೆಗಳ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎಂದು ಕಾಬೂಲ್ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥ ಅಬ್ದುಲ್ ಗಫಾರ್ ಸಯ್ಯದ್‌ಜಾದಾ ಹೇಳಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಇಟಲಿ ಧ್ವಜವನ್ನು ಹೊತ್ತಿದ್ದ ವಾಹನ ಸೇರಿದಂತೆ ಸುಮಾರು ಆರು ವಾಹನಗಳು ಸುಟ್ಟು ಕರಕಲಾಗಿದ್ದು,ಕೂಡಲೇ ಸೇನಾಪಡೆಗಳಿಗೆ ತುರ್ತುಸ್ಥಿತಿಯ ಸೂಚನೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಆತ್ಮಾಹುತಿ ದಾಳಿಯಲ್ಲಿ ಕನಿಷ್ಟ 6 ಮಂದಿ ಸಾವನ್ನಪ್ಪಿದ್ದು, ಆದರೆ ಇಟಲಿ ಸೈನಿಕರ ಸಾವು ನೋವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲವೆಂದು ರೋಮ್‌ನಲ್ಲಿ ಇಟಲಿಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘನ್ ರಕ್ಷಣಾ ಸಚಿವಾಲಯದ ವಕ್ತಾರ ಜನರಲ್ ಮೊಹಮ್ಮದ್ ಝಹೀರ್ ಅಜ್ಮಿ ಮಾತನಾಡಿ, ಘಟನೆಯಲ್ಲಿ ಕನಿಷ್ಟ 10 ನಾಗರಿಕರು ಸಾವನ್ನಪ್ಪಿದ್ದು, 52 ಮಂದಿ ಗಾಯಗೊಂಡಿದ್ದಾರೆ. ನ್ಯಾಟೋ ಪಡೆಗಳ ಸೈನಿಕರೂ ಸಾವನ್ನಪ್ಪಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲವೆಂದು ತಿಳಿಸಿದ್ದಾರೆ.
ತಾಲಿಬಾನ್ ವಕ್ತಾರರಾದ ಜಬಿಉಲ್ಲಾ ಮುಜಾಹಿದ್ ಆತ್ಮಾಹುತಿ ದಾಳಿಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು, ವಿದೇಶಿ ಪಡೆಗಳ ವಿರುದ್ಧ ತಾಲಿಬಾನಿಯೊಬ್ಬ ಆತ್ಮಾಹುತಿ ದಾಳಿ ನಡೆಸಿರುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.