ಜೆರುಸಲೇಂ, ಶುಕ್ರವಾರ, 18 ಸೆಪ್ಟೆಂಬರ್ 2009( 11:11 IST )
ಕಳೆದ ನವೆಂಬರ್ ತಿಂಗಳಿನಲ್ಲಿ ಮುಂಬೈ ಮೇಲೆ ದಾಳಿ ನಡೆಸಿರುವ ಪಾಕಿಸ್ತಾನ ಮೂಲದ ಅಲ್-ಖೈದಾದ ಅಂಗಸಂಸ್ಥೆಯು ಅಂತಹುದೇ ಸರಣಿ ದಾಳಿಗಳನ್ನು ನಡೆಸಲು ಯೋಜಿಸುತ್ತಿದೆ ಎಂಬುದಾಗಿ ಇಸ್ರೇಲ್ ಭಾರತವನ್ನು ಎಚ್ಚರಿಸಿದೆ.
ಭಾರತದಲ್ಲಿ ಪ್ರವಾಸ ಮಾಡುವ ತನ್ನ ಪ್ರಜೆಗಳಿಗೆ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿರುವ ಇಸ್ರೇಲ್‌ನ ಪ್ರವಾಸಿ ಸಂಸ್ಥೆಯು ಎಚ್ಚರಿಕೆ ನೀಡಿದ್ದು, ಬೆದರಿಕೆಯು 'ಸನ್ನಿಹಿತ ಹಾಗೂ ನಿಶ್ಚಿತ'ವಾಗಿದೆ ಎಂದು ಹೇಳಿದೆ. ಅದರಲ್ಲೂ ಜಮ್ಮು ಕಾಶ್ಮೀರದಲ್ಲಿ ಪ್ರಯಾಣಿಸುವವರು ಅತ್ಯಂತ ಜಾಗರೂಕವಾಗಿರಬೇಕು ಎಂದು ಹೇಳಿದೆ.
"ಭಾರತದಲ್ಲಿ ಮುಂಬೈ ದಾಳಿ ನಡೆಸಿರುವ ಭಯೋತ್ಪಾದನಾ ಸಂಘಟನೆಯು, ನಿರ್ದಿಷ್ಟವಾಗಿ ಪಾಶ್ಚಾತ್ಯ ಹಾಗೂ ಇಸ್ರೇಲಿ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದ್ದು, ಭಾರತದಾದ್ಯಂತ ಸರಣಿ ದಾಳಿಗಳನ್ನು ನಡೆಸಲು ಯೋಜಿಸಿದೆ" ಎಂಬುದಾಗಿ ಉಗ್ರವಾದಿ ವಿರೋಧಿ ಘಟಕವು ನೀಡಿರುವ ಹೇಳಿಕೆಯಲ್ಲಿ ಎಚ್ಚರಿಸಲಾಗಿದೆ.
ಸೂಕ್ತವಾದ ಶಸ್ತ್ರಾಸ್ತ್ರ ಭದ್ರತೆ ಇಲ್ಲದ ಪ್ರವಾಸಿ ಸ್ಥಳಗಳು, ಜನಜಂಗುಳಿಯ ಪ್ರದೇಶಗಳಿಗೆ ಭಾರತದಲ್ಲಿರುವ ಇಸ್ರೇಲಿಗಳು ಹೋಗಬೇಡಿರೆಂದು ಸಂಸ್ಥೆಯು ಸಲಹೆ ಮಾಡಿದೆ.
ಯಹೂದಿಯರ ಹೊಸವರ್ಷವಾದ ರೋಶ್ ಹಶ್ನಾ ಆಚರಣೆಯ ಹಿನ್ನೆಲೆಯಲ್ಲಿ ಭಾರತದಾದ್ಯಂತ ಚಾಬದ್ ಹೌಸ್‌ಗಳು ಅಸಂಖ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷ ನಡೆದ ಮುಂಬೈ ದಾಳಿ ವೇಳೆಗೆ ಇತರ ಹಲವು ಸ್ಥಳಗಳೊಂದಿಗೆ ಚಾಬದ್ ಹೌಸ್‌ಮೇಲೆಯೂ ದಾಳಿ ನಡೆಸಲಾಗಿದ್ದು, ಆರು ಇಸ್ರೇಲಿಗಳು ಸಾವನ್ನಪ್ಪಿದ್ದರು.