ಇಸ್ಲಾಮಾಬಾದ್, ಶುಕ್ರವಾರ, 18 ಸೆಪ್ಟೆಂಬರ್ 2009( 12:07 IST )
ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಭಾರತ ತಮ್ಮ ದೇಶದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ಮಾಡುತ್ತಿದೆ. ಈ ರೀತಿ ಒತ್ತಡ ಹೇರುವ ತಂತ್ರ ಅನುಸರಿಸುವ ಮೂಲಕ ಏನನ್ನೂ ಸಾಧಿಸಲಾಗದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ದೂರಿದ್ದಾರೆ.
ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನ ಲಾಹೋರ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ಮಧ್ಯೆ ಶಾಂತಿ ಮಾತುಕತೆ ಮುಂದುವರಿಯಬೇಕಾದರೆ ಯಾವುದೇ ರೀತಿಯ ಪೂರ್ವ ಷರತ್ತುಗಳನ್ನು ವಿಧಿಸಬಾರದು. ಒತ್ತಡ ತಂತ್ರದ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ಭಾರತ ಭಾವಿಸಿದ್ದರೆ ಅದು ತಪ್ಪು ಎಂದು ತಿಳಿಸಿದ್ದಾರೆಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಅಬ್ದುಲ್ ಬಾಸಿತ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಜತೆ ದ್ವಿಪಕ್ಷೀಯ ಸಂಬಂಧ ಕುರಿತು ಮಾತನಾಡಲಿರುವುದರಿಂದ ಖುರೇಷಿ ಅವರ ಆಪಾದನೆ ಹೆಚ್ಚಿನ ಮಹತ್ವ ಪಡೆದಿದೆ.
ಆಂತರಿಕ ರಾಜಕೀಯದ ಒತ್ತಡಕ್ಕೆ ಮಣಿದು ಭಾರತ ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ತಾನವನ್ನು ವಿಶ್ವ ಸಮುದಾಯದ ಎದುರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ. ಆದರೆ ಇದರಿಂದ ಪಾಕಿಸ್ತಾನದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.