ಆಂಕೋರೇಜ್(ಅಲಾಸ್ಕ), ಶನಿವಾರ, 19 ಸೆಪ್ಟೆಂಬರ್ 2009( 15:47 IST )
ಮಾಜಿ ರಿಪಬ್ಲಿಕ್ ಉಪಾಧ್ಯಕ್ಷೆ ಅಭ್ಯರ್ಥಿ ಸಾರಾ ಪಾಲಿನ್ ಜತೆ ಔತಣಕೂಟದಲ್ಲಿ ಭಾಗವಹಿಸುವುದೇ ತಮ್ಮ ಅದೃಷ್ಟವೆಂದು ಪಾಲಿನ್ ಅವರ ಕೆಲವು ಅಭಿಮಾನಿಗಳು ಭಾವಿಸಿದ್ದಾರೆ. ಸಾರಾ ಪಾಲಿನ್ ಜತೆ ಇಂತಹದ್ದೊಂದು ಔತಣಕೂಟದಲ್ಲಿ ಜತೆಗೂಡಲು ಅವರ ಅಪ್ಪಟ ಅಭಿಮಾನಿಯೊಬ್ಬರು ಒಟ್ಟು 63.500 ಡಾಲರ್ ಪಾವತಿ ಮಾಡಲೂ ಹಿಂಜರಿದಿಲ್ಲ.
ಗಾಯಗೊಂಡ ಯೋಧರಿಗೆ ನೆರವು ನೀಡುವ ದತ್ತಿಸಂಸ್ಥೆಗೆ ಸಹಾಯಮಾಡುವ ಇಂಟರ್‌ನೆಟ್ ಹರಾಜಿನಲ್ಲಿ ಅಲಾಬಾಮಾದ ಹಂಟ್ಸ್‌ವಿಲ್ಲೆಯ ಕ್ಯಾಥಿ ಮ್ಯಾಪಲ್ಸ್ ಸಾರಾ ಪಾಲಿನ್ ಜತೆ ಔತಣಕೂಟದಲ್ಲಿ ಪಾಲ್ಗೊಳ್ಳುವ ಸೌಭಾಗ್ಯವನ್ನು ಶುಕ್ರವಾರ ಗೆದ್ದಿದ್ದಾರೆ.
ಈ ರಾಷ್ಟ್ರಕ್ಕಾಗಿ ಹೋರಾಡುವ ಪುರುಷರು ಮತ್ತು ಮಹಿಳೆಯರು ಹಾಗೂ ಮಿಲಿಟರಿಗೆ ತಾವು ಸಂಪೂರ್ಣ ಬೆಂಬಲಿಸುವುದಾಗಿ ಮಾಪಲ್ಸ್ ಹೇಳಿದರು. ರಕ್ಷಣಾ ಗುತ್ತಿಗೆ ಕಂಪೆನಿಯ ಮಾಲೀಕತ್ವ ಹೊಂದಿರುವ ಮಾಪಲ್ಸ್, ಪಾಲಿನ್ ಪರ ತಾವು ಮಹಾನ್ ವಾದಿಯೆಂದು ಹೇಳಿದ್ದು, ಪಾಲಿನ್ ಅಮೆರಿಕದ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ.
ಸೈಕ್ಲಿಂಗ್ ಕಾರ್ಯಕ್ರಮಗಳಿಗಾಗಿ ಗಾಯಗೊಂಡ ಯುದ್ಧವೀರರಿಗೆ ನೆರವಾಗುವ ರೈಡ್ 2 ರಿಕವರಿ ಕಾರ್ಯಕ್ರಮಕ್ಕೆ ಈಬೇನಲ್ಲಿ ದತ್ತಿ ಹರಾಜು ಕಾರ್ಯಕ್ರಮದ ಭಾಗವಾಗಿ ಪಾಲಿನ್ ತಮ್ಮ ಜತೆ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಪಾಲಿನ್ ಅವರನ್ನು ಅಲಾಸ್ಕದಲ್ಲಿ ಭೇಟಿಗೆ ಪ್ರಯಾಣದ ಬಿಲ್ ಕೂಡ ವಿಜೇತರು ಭರಿಸಬೇಕು ಎಂದು ಸಂಘಟಕರು ತಿಳಿಸಿದ್ದು, ಅದೇನೂ ಸಮಸ್ಯೆಯಲ್ಲ ಎಂದು ಮ್ಯಾಪಲ್ಸ್ ಹೇಳಿದ್ದಾರೆ.