ಇಸ್ಲಾಮಾಬಾದ್, ಶನಿವಾರ, 19 ಸೆಪ್ಟೆಂಬರ್ 2009( 18:15 IST )
ಪಾಕಿಸ್ತಾನದ ಅಣ್ವಸ್ತ್ರ ಸಾಧನಗಳು ಸುರಕ್ಷಿತ ಕೈಗಳಲ್ಲಿದ್ದು, ಉಗ್ರಗಾಮಿಗಳು ಅದನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿಲ್ಲವೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದಲ್ಲಿ ಉಪನ್ಯಾಸ ಪ್ರವಾಸದಲ್ಲಿರುವ ಮುಷರಫ್, ಟೆಕ್ಸಾಸ್ ಸಾನ್ ಆಂಟೆನಿಯೊ ಟ್ರಿನಿಟಿ ವಿವಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿವಾದ ಮತ್ತು ಇಸ್ರೇಲ್-ಪ್ಯಾಲೆಸ್ಟೀನ್ ಸಮಸ್ಯೆಗಳ ಪರಿಹಾರ ಸೇರಿದಂತೆ ಭಯೋತ್ಪಾದನೆ ಸಮಸ್ಯೆಗೆ ದೂರಗಾಮಿ ಪರಿಹಾರಗಳನ್ನು ತಮ್ಮ ಉಪನ್ಯಾಸದಲ್ಲಿ ಮುಷರಫ್ ಸಲಹೆ ಮಾಡಿದರು.
ಭಾರತ ಮಾತ್ರವಲ್ಲದೇ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಕೂಡ ಉಗ್ರಗಾಮಿ ಉಪಟಳ ಎದುರಿಸುತ್ತಿದೆಯೆಂದು ಮುಷರಫ್ ತಿಳಿಸಿದರು. ನಾವು ಹೆಚ್ಚು ಪಡೆಗಳನ್ನು ನಿಯೋಜಿಸಬೇಕು. ನಾವು ಭಯೋತ್ಪಾದನೆಯನ್ನು ಯಾವುದೇ ಬೆಲೆ ತೆತ್ತಾದರೂ ಸೋಲಿಸಬೇಕು ಎಂದು ಟ್ರಿನಿಟಿ ಲಾರಿ ಸಭಾಂಗಣದಲ್ಲಿ ಕಿಕ್ಕಿರಿದ ಗುಂಪಿಗೆ ಅವರು ಹೇಳಿದರು.