ಕೆಲವು ದಿನಗಳ ಹಿಂದೆ ಪೊಲೀಸರ ಜತೆ ಶೂಟ್‌ಔಟ್‌ನಲ್ಲಿ ಹತನಾಗಿದ್ದ ಭಯೋತ್ಪಾದಕ ಮುಖಂಡ ನೂರುದ್ದೀನ್ ಟಾಪ್ ಎನ್ನುವುದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆಯೆಂದು ಇಂಡೊನೇಶಿಯ ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಧ್ಯ ಜಾವಾದ ಸುರಕ್ಷಿತ ಮನೆಯೊಂದರಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದ ನೂರುದ್ದೀನ್ ದೇಹವನ್ನು ಗುರುತಿಸಲು ಪೊಲೀಸರು ಬೆರಳಚ್ಚುಗಳನ್ನು ಬಳಸಿದ್ದರು.
ಡಿಎನ್‌ಎ ಪರೀಕ್ಷೆಯು ಬೆರಳಚ್ಚಿನ ವರದಿಯನ್ನು ದೃಢಪಡಿಸಿದೆಯೆಂದು ರಾಷ್ಟ್ರೀಯ ಪೊಲೀಸ್ ವಕ್ತಾರ ನಾನನ್ ಸುಕರ್ನಾ ತಿಳಿಸಿದ್ದಾರೆ. ಪೊಲೀಸರು ಕಳೆದ ತಿಂಗಳು ಗುಂಡಿನಚಕಮಕಿಯಲ್ಲಿ ಕೊಂದ ಭಯೋತ್ಪಾದಕ ಶಂಕಿತನನ್ನು ನೂರುದ್ದೀನ್ ಎಂದು ಆರಂಭದಲ್ಲಿ ಪೊಲೀಸರು ನಂಬಿದ್ದರು. ಆದರೆ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದ ಬಳಿಕ ಸತ್ತವನು ನೂರುದ್ದೀನ್ ಅಲ್ಲವೆಂದು ದೃಢಪಟ್ಟಿತ್ತು.
ಮಲೇಶಿಯದ ಪೌರನಾದ ನೂರುದ್ದೀನ್, ಬಾಲಿಯ ವಿಹಾರಧಾಮದ ದ್ವೀಪದಲ್ಲಿ 2002 ಮತ್ತು 2005ರ ಆತ್ಮಾಹುತಿ ಬಾಂಬ್ ದಾಳಿಗಳು ಮತ್ತು ಜಕಾರ್ತದ ಜೆಡಬ್ಲ್ಯು ಮಾರಿಯಟ್ ಮತ್ತು ರಿಟ್ಜ್ ಕಾರ್ಲ್‌ಟನ್ ಹೊಟೆಲ್‌ಗಳಲ್ಲಿ ಜು.17ರ ಬಾಂಬ್ ದಾಳಿಗಳನ್ನು ಯೋಜಿಸಿದ್ದ. ಒಟ್ಟಾರೆಯಾಗಿ ಅವನು ಬಹುತೇಕ ವಿದೇಶಿಯರು ಕೂಡಿದ 222 ಜನರ ಹತ್ಯೆಗೆ ಕಾರಣನಾಗಿದ್ದನೆಂದು ಹೇಳಲಾಗಿದೆ.