ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ಸೂತ್ರಧಾರಿ ಸಯೀದ್‌ಗೆ ಗೃಹಬಂಧನ (Lahore | Jamaat | Saeed | Mumbai)
 
ಕರಾಳ ಭಯೋತ್ಪಾದನೆ ಮ‌ೂಲಕ ಮುಂಬೈಯನ್ನು ನಡುಗಿಸಿದ 26/11 ದಾಳಿಯ ರೂವಾರಿ, ನಿಷೇಧಿತ ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ಗೃಹಬಂಧನದಲ್ಲಿ ಇರಿಸಿದೆ. ಸಯೀದ್ ಮನೆಯ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆಯೆಂದು ತಿಳಿದುಬಂದಿದೆ.

ಸಯೀದ್ ಚಲನವಲನದ ಬಗ್ಗೆ ಪೊಲೀಸರು ನಿರ್ಬಂಧಗಳನ್ನು ವಿಧಿಸಿದ್ದು, ಗಡಾಫಿ ಸ್ಟೇಡಿಯಂನಲ್ಲಿ ಈದ್ ಪ್ರಾರ್ಥನೆ ಮಾಡುವುದಕ್ಕೆ ಅವನಿಗೆ ನಿಷೇಧ ವಿಧಿಸಿದ್ದಾರೆ.ಪೊಲೀಸ್ ತಂಡವನ್ನು ಅವನ ಮನೆಯ ಹೊರಗೆ ಇರಿಸಲಾಗಿದ್ದು, ಅವನ ಚಲನವಲನ ನಿರ್ಬಂಧಿಸಲಾಗದಿದೆಯೆಂದು ಜಿಯೊ ನ್ಯೂಸ್ ವರದಿ ಮಾಡಿದೆ.

ಸಯೀದ್ ವಿರುದ್ಧ ಎರಡು ಪ್ರಥಮ ಮಾಹಿತಿ ವರದಿಗಳನ್ನು ಸಲ್ಲಿಸಿದ ಬಳಿಕ ಅವನನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೆಂದು ವರದಿಯಾಗಿದೆ. ಹಫೀಜ್ ಸಯೀದ್‌ ವಿರುದ್ಧ ಯಾವುದೇ ದೃಢ ಸಾಕ್ಷ್ಯಾಧಾರವಿಲ್ಲವೆಂದು ಪಾಕಿಸ್ತಾನ ಕೋರ್ಟ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಈ ಕ್ರಮದ ವಿರುದ್ಧ ಭಾರತ ಸರ್ಕಾರ ವ್ಯಾಪಕ ಖಂಡನೆ ಮಾಡಿದ್ದಲ್ಲದೇ, ಮುಂಬೈ ಭಯೋತ್ಪಾದನೆಯ ಸೂತ್ರಧಾರ ಸಯೀದ್ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದೆ.

ಹಫೀಜ್ ಸಯೀದ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಗೃಹಸಚಿವ ಚಿದಂಬರಂ, ಸಯೀದ್ ವಿರುದ್ಧ ಸಲ್ಲಿಸಲಾದ ಎಫ್‌ಐಆರ್ 26/11 ಭಯೋತ್ಪಾದನೆಗೆ ಸಂಬಂಧಿಸಿದ್ದಲ್ಲವೆಂದು ತಿಳಿಸಿದ್ದು, ಪಾಕಿಸ್ತಾನ ನೆಲದಿಂದ ಭಯೋತ್ಪಾದನೆ ದಾಳಿ ಕುರಿತು ಎಲ್ಲ ಸಾಕ್ಷ್ಯಾಧಾರ ನೀಡಲಾಗಿದೆಯೆಂದು ಸ್ಪಷ್ಟಪಡಿಸಿದರು. ಸಯೀದ್ ವಿರುದ್ಧ 26/11 ಭಯೋತ್ಪಾದನೆ ಕುರಿತು ತನಿಖೆ ನಡೆಸಬೇಕೆಂದೂ ಚಿದಂಬರಂ ಆಗ್ರಹಿಸಿದ್ದಾರೆ. ಪಾಕಿಸ್ತಾನ ಮಾತ್ರ ಸಯೀದ್ ವಿರುದ್ಧ ಮುಂಬೈ ಭಯೋತ್ಪಾದನೆ ಕುರಿತು ಸಾಕಷ್ಟು ಸಾಕ್ಷ್ಯಾಧಾರವಿಲ್ಲವೆಂದು ಹೇಳುತ್ತಲೇ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ