ಚೀನ, ಇರಾನ್, ಲಿಬ್ಯಾದೊಂದಿಗೆ ಪಾಕ್ ಅಣ್ವಸ್ತ್ರ ನಂಟು: ಎಕ್ಯೂ ಖಾನ್
ಇಸ್ಲಾಮಾಬಾದ್, ಸೋಮವಾರ, 21 ಸೆಪ್ಟೆಂಬರ್ 2009( 12:34 IST )
ಪಾಕಿಸ್ತಾನವು ಇರಾನ್ ಮತ್ತು ಉತ್ತರ ಕೊರಿಯದ ವಿವಾದಾತ್ಮಕ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ನಂಟು ಹೊಂದಿತ್ತೆಂದು ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಎ.ಕ್ಯೂ.ಖಾನ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಇದರಿಂದಾಗಿ ಪಾಕಿಸ್ತಾನ ರಹಸ್ಯವಾಗಿ ಅಣ್ವಸ್ತ್ರ ಪ್ರಸರಣ ಮಾಡುತ್ತಿದ್ದ ವಿಷಯ ಬಯಲಾಗಿದೆ. ವಿಶ್ವದ ದೊಡ್ಡ ಅಣ್ವಸ್ತ್ರ ಕಾಳಸಂತೆಯ ರೂವಾರಿಯೆಂದು ಹೇಳಲಾದ 74 ವರ್ಷ ವಯಸ್ಸಿನ ಕಳಂಕಿತ ಖಾನ್, ತಮ್ಮ ಡಚ್ ಪತ್ನಿ ಹೆನ್ನಿಗೆ ಬರೆದ ನಾಲ್ಕು ಪುಟಗಳ ರಹಸ್ಯ ಪತ್ರದಲ್ಲಿ ಇವೆಲ್ಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆಂದು ಸಂಡೇ ಟೈಮ್ಸ್ ವರದಿ ಮಾಡಿದೆ.
2003ರಲ್ಲಿ ಖಾನ್ ಬಂಧನವಾದ ಬಳಿಕ ತಮ್ಮ ಪತ್ನಿಗೆ ಈ ಪತ್ರವನ್ನು ಅವರು ಬರೆದಿದ್ದರು. ಚೀನಾದ ಜತೆ ಪಾಕಿಸ್ತಾನದ ಪರಮಾಣು ಸಖ್ಯಗಳು ಮತ್ತು ಇರಾನ್ ಮತ್ತು ಉತ್ತರಕೊರಿಯಕ್ಕೆ ಪರಮಾಣು ಕಾರ್ಯಕ್ರಮಕ್ಕೆ ಅಧಿಕೃತ ಬೆಂಬಲದ ಬಗ್ಗೆ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ. ಲಿಬ್ಯಾ ವಿಷಯವನ್ನು ಕೂಡ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಇರಾನ್ ಕುರಿತು ಖಾನ್ ಕೆಳಗಿನಂತೆ ತಿಳಿಸಿದ್ದು, ಬಿಬಿ(ಬೇನಜೀರ್ ಭುಟ್ಟೊ) ಮತ್ತು ಜನರಲ್ ಇಮ್ತಿಯಾಜ್(ಬೇನಜೀರ್ ರಕ್ಷಣಾ ಸಲಹೆಗಾರ, ಈಗ ಸತ್ತಿದ್ದಾರೆ) ತಮಗೆ ಕೆಲವು ಚಿತ್ರಗಳನ್ನು ಮತ್ತು ಬಿಡಿಭಾಗಗಳನ್ನು ಇರಾನಿಯನ್ನರಿಗೆ ನೀಡುವಂತೆ ತಿಳಿಸಿದ್ದು, ಇರಾನಿಯನ್ನರಿಗೆ ಪೂರೈಕೆದಾರರ ವಿಳಾಸ ಮತ್ತು ಹೆಸರನ್ನು ಕೂಡ ನೀಡಲಾಗಿದೆಯೆಂದು ಬರೆದಿದ್ದಾರೆ. ಉತ್ತರ ಕೊರಿಯದ ಬಗ್ಗೆ ಖಾನ್ ತಿಳಿಸುತ್ತಾ, ನಿವೃತ್ತ ಜನರಲ್‌ವೊಬ್ಬರು ಉತ್ತರಕೊರಿಯನ್ನರಿಂದ ತಮ್ಮ ಮೂಲಕ 3 ದಶಲಕ್ಷ ಡಾಲರ್ ಹಣವನ್ನು ಪಡೆದಿದ್ದು, ಕೆಲವು ಚಿತ್ರಗಳು ಮತ್ತು ಯಂತ್ರಗಳನ್ನು ನೀಡುವಂತೆ ತಮಗೆ ಕೇಳಿದರೆಂದು ಹೇಳಿದ್ದಾರೆ.
ತಮ್ಮ ಸಂಸ್ಕರಿತ ಘಟಕದ ಮೊದಲನೇ ಗ್ರಾಹಕರೇ ಚೀನಾ ಎಂದು ಅವರು ಬರೆದಿದ್ದಾಗಿ ಸುದ್ದಿಪತ್ರಿಕೆ ವರದಿಮಾಡಿದೆ. 1982ರಲ್ಲಿ ಎರಡು ಪರಮಾಣು ಬಾಂಬ್ ತಯಾರಿಕೆಗೆ ಅಧಿಕ ಸಂಸ್ಕರಿತ ಯುರೇನಿಯಂ ಪೂರೈಕೆ ಮಾಡಿದ್ದು ಚೀನಾ ಎಂದು ಅವರು ಬಹಿರಂಗಮಾಡಿದ್ದಾರೆ. ಕ್ಸಿಯಾನ್ ನೈರುತ್ಯಕ್ಕೆ 250 ಕಿಮೀ ದೂರದ ಹಾಂಗ್‌ಜಾಂಗ್‌ನಲ್ಲಿ ನಾವು ಸೆಂಟ್ರಿಫ್ಯೂಜ್ ಘಟಕ ಸ್ಥಾಪಿಸಿದ್ದಾಗಿ ಖಾನ್ ಪತ್ರದಲ್ಲಿ ಹೇಳಿದ್ದಾರೆ. ಚೀನಾ ನಮಗೆ ಅಣ್ವಸ್ತ್ರದ ರೇಖಾಚಿತ್ರಗಳನ್ನು ನೀಡಿತು. ಸಂಸ್ಕರಿತ 50 ಕೇಜಿ ಯುರೇನಿಯಂ, ಯುಎಫ್6(ನೈಸರ್ಗಿಕ) 10 ಟನ್ ಮತ್ತು ಯುಎಫ್6(ಶೇ.3) 5 ಟನ್ ನೀಡಿತೆಂದು ಅವರು ಹೇಳಿದ್ದಾರೆ.