ಇಸ್ಲಾಮಾಬಾದ್, ಸೋಮವಾರ, 21 ಸೆಪ್ಟೆಂಬರ್ 2009( 10:59 IST )
ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರು ಕಳೆದ ವರ್ಷ ಅಧ್ಯಕ್ಷ ಪದವಿಯಿಂದ ನಿರ್ಗಮಿಸಿದ ಕೂಡಲೇ ಅವರಿಗೆ ಸುರಕ್ಷಿತ ನಿರ್ಗಮನವನ್ನು ಬಯಸಿದ್ದಾಗಿ ಅಮೆರಿಕ ಮೊದಲ ಬಾರಿಗೆ ಬಹಿರಂಗ ಮಾಡಿದೆ. ಮುಷರಫ್ ಸುರಕ್ಷಿತ ನಿರ್ಗಮನಕ್ಕೆ ಮತ್ತು ಗೌರವಾನ್ವಿತ ನಿವೃತ್ತಿಗೆ ವಾಷಿಂಗ್ಟನ್ ಬಯಸಿತ್ತೆಂದು ಖಾಸಗಿ ಸುದ್ದಿ ಚಾನೆಲ್ ಉಲ್ಲೇಖಿಸಿ ಡೇಲಿ ಟೈಮ್ಸ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಶಾಂತಿಯುತವಾಗಿ ಪ್ರಜಾಪ್ರಭುತ್ವ ಪರಿವರ್ತನೆಯನ್ನು ಅಮೆರಿಕ ಬಯಸಿತ್ತೆಂದು ಅಮೆರಿಕದ ಪ್ರತಿನಿಧಿ ತಿಳಿಸಿದರು.ಮುಷರಫ್ ಪಾಕಿಸ್ತಾನದ ಮೇಲೆ ಹೇರಿದ ಕರಾಳ ತುರ್ತುಪರಿಸ್ಥಿತಿ ಅಸಂವಿಧಾನಿಕ ಮತ್ತು ಅಕ್ರಮವೆಂದು ಪಾಕ್ ಸುಪ್ರೀಂಕೋರ್ಟ್ ಇತ್ತೀಚೆಗೆ ಘೋಷಿಸಿದ ಬಳಿಕ, ಮುಷರಫ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ವಿಚಾರಣೆಗೆ ಗುರಿಪಡಿಸುವ ಸ್ಥಿತಿ ಉದ್ಭವಿಸಿದೆ.
ಆದರೆ ಮುಷರಫ್ ವಿದೇಶದಲ್ಲಿ ನೆಲೆಸಿದ್ದು ವಿಚಾರಣೆಗೆ ಹಾಜರಾಗದೇ ಸುಪ್ರೀಂಕೋರ್ಟ್ ಸಮನ್ಸ್ ಉಲ್ಲಂಘಿಸಿದ್ದಾರೆ. ಆದಾಗ್ಯೂ, ಅಮೆರಿಕದ ರಾಯಭಾರಿ ಈ ಕುರಿತು ಪ್ರತಿಕ್ರಿಯಿಸುತ್ತಾ, ಪಾಕಿಸ್ತಾನ ಸಂವಿಧಾನದ 6ನೇ ವಿಧಿಯನ್ವಯ ದೇಶದ್ರೋಹದ ಬಗ್ಗೆ ಮುಷರಫ್ ವಿಚಾರಣೆ ನಡೆಸುವ ನಿರ್ಧಾರವು ದೇಶದ ಆಂತರಿಕ ವಿಚಾರವೆಂದು ಹೇಳಿದ್ದಾರೆ.