ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತರಾದ 6 ಮಂದಿ ಇಟಲಿಯ ಸೈನಿಕರ ದೇಹಗಳನ್ನು ರೋಂ ನಗರಕ್ಕೆ ತರಲಾಗಿದೆ. ಇಟಲಿಯ ಅಧ್ಯಕ್ಷ ಜಿಯಾರ್ಜಿಯೊ ನಾಪೊಲಿಟಾನೊ, ಕುಟುಂಬದ ಸದಸ್ಯರು ಮೃತದೇಹಗಳ ದರ್ಶನ ಪಡೆದರು. ಸೋಮವಾರ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಒಂದು ನಿಮಿಷದ ಮೌನಾಚರಣೆ ಮೂಲಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು.
5 ವರ್ಷಗಳ ಕೆಳಗೆ ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಇಟಲಿ ತನ್ನ ಪಡೆಗಳನ್ನು ಕಳಿಸಿದ ಬಳಿಕ 6 ಸೈನಿಕರ ಹತ್ಯೆ ರಾಷ್ಟ್ರಕ್ಕೆ ಉಂಟಾದ ದೊಡ್ಡ ನಷ್ಟವೆಂದು ಹೇಳಲಾಗಿದೆ. 6 ಮೃತದೇಹಗಳ ಶವಪೆಟ್ಟಿಗೆಗಳನ್ನು ಅಧ್ಯಕ್ಷ ನಾಪೊಲಿಟಾನೊ ಸ್ಪರ್ಶಿಸಿದಾಗ ಹೃದಯಸ್ಪರ್ಶಿ ಸನ್ನಿವೇಶವಾಗಿತ್ತು ಎಂದು ಬಿಬಿಸಿಯ ವರದಿಗಾರ ತಿಳಿಸಿದ್ದಾರೆ. ಸೈನಿಕರ ಹತ್ಯೆಯು ಇಟಲಿಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಸುದ್ದಿಪತ್ರಿಕೆಗಳು ಮತ್ತು ಟೆಲಿವಿಷನ್‌ನಲ್ಲಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ.
ಇಟಲಿಯು ಆಫ್ಘಾನಿಸ್ತಾನದ ಕದನದಲ್ಲಿ ಪಾತ್ರವಹಿಸುವ ಬಗ್ಗೆ ವಾದವಿವಾದಕ್ಕೆ ಈ ಹತ್ಯೆಗಳು ನಾಂದಿಹಾಡಿವೆಯೆಂದು ವರದಿಗಾರರು ಹೇಳಿದ್ದಾರೆ. ಆಫ್ಘನ್‌ನಲ್ಲಿ 3000 ಇಟಲಿಯ ಸೈನಿಕರಿದ್ದು, ಕಾಬೂಲ್ ಮತ್ತು ಹೇರಾತ್ ಪಶ್ಚಿಮ ಪ್ರದೇಶದಲ್ಲಿ ಬಹುತೇಕ ಮಂದಿ ಸೈನಿಕರಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಇಟಲಿಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದು, ಇಟಲಿ ಭಾರೀ ಬೆಲೆ ತೆರುತ್ತಿದ್ದರೂ, ಪಡೆಗಳು ಆಫ್ಘಾನಿಸ್ತಾನದಲ್ಲೇ ಉಳಿದಿರುತ್ತದೆಂದು ವಿದೇಶಾಂಗ ಸಚಿವ ಫ್ರಾಂಕೊ ಫ್ರಟ್ಟಾನಿ ತಿಳಿಸಿದ್ದಾರೆ.