ಇಸ್ಲಾಮಿಕ್ ತಾಲಿಬಾನ್ ಚಳವಳಿಯ ಭೂಗತ ನಾಯಕ ಮುಲ್ಲಾ ಓಮರ್ ಆಫ್ಘಾನಿಸ್ತಾನದಲ್ಲಿರುವ ಪಾಶ್ಚಿಮಾತ್ಯ ಪಡೆಗಳಿಗೆ ಎಚ್ಚರಿಕೆ ನೀಡುತ್ತಾ, ನಿಮಗೆ ಸಂದೇಹವಿಲ್ಲದ ಸೋಲು ಸನ್ನಿಹಿತವಾಗಿದ್ದು ಇತಿಹಾಸದಿಂದ ಪಾಠ ಕಲಿಯಬೇಕೆಂದು ತಿಳಿಸಿದ್ದಾನೆ. ತಾಲಿಬಾನ್ ಆಡಳಿತವನ್ನು ಉರುಳಿಸಿದ ಅಮೆರಿಕ ನೇತೃತ್ವದ ಕಾರ್ಯಾಚರಣೆಯ 8ನೇ ವಾರ್ಷಿಕಕ್ಕೆ ಕೆಲವೇ ವಾರಗಳು ಮುಂಚಿತವಾಗಿ, ವಸಾಹತುಶಾಹಿ ಸೈನ್ಯಗಳಿಗೆ ಸ್ಮಶಾನಸದೃಶವೆಂದು ಓಮರ್ ಆಫ್ಘಾನಿಸ್ತಾನವನ್ನು ಚಿತ್ರಿಸಿದ್ದಾನೆ.
ಈದ್ ಮುಸ್ಲಿಂ ಉತ್ಸವ ಸಂಕೇತವಾಗಿ ಹೊರಡಿಸಿದ ಹೇಳಿಕೆಯಲ್ಲಿ, ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ಒಂದು ಲಕ್ಷ ನ್ಯಾಟೊ ಮತ್ತು ಅಮೆರಿಕ ನೇತೃತ್ವದ ಪಡೆಗಳಲ್ಲಿ ಭಾರೀ ಸಾವುನೋವುಗಳು ಸಂಭವಿಸಿ ನೈತಿಕ ಸ್ಥೈರ್ಯ ಕುಸಿಯುತ್ತಿರುವ ಬಗ್ಗೆ ಬಣ್ಣಿಸಿದ್ದಾನೆ.
ಇತ್ತೀಚಿನ ತಿಂಗಳುಗಳಲ್ಲಿ ತಾಲಿಬಾನ್ ನಂಟಿನ ಉಗ್ರರು ಚಿಗುರಿಕೊಳ್ಳುತ್ತಿದ್ದು ರಸ್ತೆಬದಿಯ ಬಾಂಬ್ ಬಳಕೆಯನ್ನು ವಿಶೇಷವಾಗಿ ದಕ್ಷಿಣ ಭಾಗದಲ್ಲಿ ಹೆಚ್ಚಿಸಿದ್ದಾರೆ. ಈ ವರ್ಷ 350ಕ್ಕೂ ಹೆಚ್ಚು ವಿದೇಶಿ ಪಡೆಗಳು ಹತರಾಗಿದ್ದು, 2001ರ ಅ.7ರಿಂದ ಅತ್ಯಂತ ಮಾರಕವಾಗಿ ಪರಿಣಮಿಸಿದೆ.
ಆಫ್ಘಾನಿಸ್ತಾನದಲ್ಲಿ ಪಡೆಗಳನ್ನು ನಿಯೋಜಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯ ಪ್ರಸಕ್ತ ಬಿಕ್ಕಟ್ಟನ್ನು ಮತ್ತಷ್ಟು ಎಳೆದು, ಪರಿಹಾರವೇ ಸಿಗುವುದಿಲ್ಲವೆಂದು ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಅಲೆಕ್ಸಾಂಡರ್ ಆಕ್ರಮಣದಿಂದ ಹಿಡಿದು ಗಂಗಾನದಿಯ ಕಾಲದಿಂದಲೂ ಆಕ್ರಮಣಕಾರರು ಇತಿಹಾಸದ ಪಾಠ ಕಲಿಯಬೇಕು ಎಂದು ಮುಲ್ಲಾ ಓಮರ್‌ನ ಇಂಗ್ಲಿಷ್ ತರ್ಜುಮೆಯ ಹೇಳಿಕೆಯಲ್ಲಿ ತಿಳಿಸಿದ್ದಾನೆ.