ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನರಕಸದೃಶ ಬದುಕಿಗೆ ಅಂತಿಮ ತೆರೆಎಳೆದ ರೊಸೆಟ್ಟಿಯರ್ (Australia | Court | Rossiter | Hammond)
 
ದಯಾಮರಣ ಕಲ್ಪಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದ ಆಸ್ಟ್ರೇಲಿಯದ ವ್ಯಕ್ತಿ, 49ರ ಪ್ರಾಯದ ಕ್ರಿಸ್ಟಿಯನ್ ರೊಸೆಟ್ಟಿಯರ್ ತಮ್ಮ ನಿವಾಸದಲ್ಲಿ ಅಸುನೀಗಿದ್ದಾರೆಂದು ಅವರ ಸೋದರ ಟಿಮ್ ರೊಸೆಟ್ಟಿಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2004ರ ರಸ್ತೆ ಅಪಘಾತದಲ್ಲಿ ಕೈಕಾಲುಗಳ ಚಲನೆ ಕಳೆದುಕೊಂಡು ಜೀವಂತ ಶವವಾಗಿ ನರಕಸದೃಶ ಬದುಕು ನಡೆಸುತ್ತಿದ್ದ ಕ್ರಿಸ್ಟಿಯನ್‌ಗೆ ಆಹಾರವನ್ನು ನಿರಾಕರಿಸಿ ಹಸಿವಿನಿಂದ ಸಾಯುವುದಕ್ಕೆ ಅವಕಾಶ ಕಲ್ಪಿಸಬೇಕೆಂದು ಇತ್ತೀಚೆಗೆ ಕೋರ್ಟ್‌ಗೆ ಅವರ ವಕೀಲರು ಅರ್ಜಿ ಹಾಕಿದ್ದರು. ಕ್ರಿಸ್ಟಿಯನ್ ಅಂತಿಮ ದಿನಗಳಲ್ಲಿ ಬದುಕನ್ನು ಗೌರವಾನ್ವಿತವಾಗಿ, ಸುಸೂತ್ರವಾಗಿ ಕಳೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿಕೆಯಲ್ಲಿ ಸೋದರ ತಿಳಿಸಿದ್ದಾರೆ. ಕ್ರಿಸ್ಟಿಯನ್ ರೊಸೆಟ್ಟಿಯರ್ ಪ್ರಕರಣವನ್ನು ಕೋರ್ಟ್‌‌ಗೆ ಒಯ್ದ ಜಾನ್ ಹ್ಯಾಮಂಡ್, ಕ್ರಿಸ್ಟಿಯನ್ ಸಾವಿನಿಂದ ನಿಟ್ಟುಸಿರು ಬಿಡುವಂತಾಗಿದೆಯೆಂದು ಹೇಳಿದ್ದಾರೆ.

ಸೆವೆನ್ ನೆಟ್‌ವರ್ಕ್ ಟೆಲಿವಿಷನ್ ಜತೆ ಮಾತನಾಡುತ್ತಿದ್ದ ಅವರು, ನರಕಸದೃಶ ಜೀವನ ಸಾಗಿಸುವ ಅನೇಕ ಮಂದಿಗೆ ಕ್ರಿಸ್ಟಿಯನ್ ದಿಟ್ಟ ಹೋರಾಟ ಆದರ್ಶಪ್ರಾಯವೆಂದು ನುಡಿದರು.ಕಳೆದ ವರ್ಷ ರಸ್ತೆ ಅಪಘಾತವೊಂದರಲ್ಲಿ ಬೆನ್ನಿನ ಮ‌ೂಳೆ ಮುರಿದುಕೊಂಡ ಕ್ರಿಸ್ಟಿಯನ್ ಕೈಕಾಲುಗಳ ಚಲನೆ ಕಳೆದುಕೊಂಡಿದ್ದರು. ನಳಿಕೆಗಳ ಮ‌ೂಲಕ ಆಹಾರ ಮತ್ತು ನೀರನ್ನು ರೊಸೆಟ್ಟಿಯರ್ ಹೊಟ್ಟೆಗೆ ನೀಡಲಾಗುತ್ತಿತ್ತು. ಇಂತಹ ನರಕಸದೃಶ ಬದುಕಿಗೆ ತೆರೆಎಳೆಯಲು ನಿರ್ಧರಿಸಿದ ರೊಸೆಟ್ಟಿಯರ್, ತಮಗೆ ನಳಿಕೆಯ ಮ‌ೂಲಕ ಆಹಾರ ಸೇವನೆ ನಿಲ್ಲಿಸುವಂತೆ ಪದೇ ಪದೇ ಒತ್ತಾಯಿಸಿದರು.

ರೊಸೆಟ್ಟಿಯರ್ ನಿರ್ಧಾರಕ್ಕೆ ಮನ್ನಣೆ ನೀಡುವಂತೆ ಪಶ್ಚಿಮ ಆಸ್ಟ್ರೇಲಿಯ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ರೊಸೆಟ್ಟಿಯರ್ ಆಹಾರ ಸೇವನೆ ತ್ಯಜಿಸಿದ್ದರು. ರೊಸೆಟ್ಟಿಯರ್ ಎದೆ ಸೋಂಕಿಗೂ ಕೂಡ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದರೆಂದು ಸೆವೆನ್ ನೆಟ್‌ವರ್ಕ್ ವರದಿ ಮಾಡಿತ್ತು. ಅಂತಿಮ ದಿನಗಳಲ್ಲಿ ಆಹಾರ ತ್ಯಜಿಸಿದ ರೊಸೆಟ್ಟಿಯರ್ ಪರಿಸ್ಥಿತಿ ತೀವ್ರ ಹದಗೆಟ್ಟು, ಅಂತಿಮ 3 ದಿನಗಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದರೆಂದು ತಿಳಿದುಬಂದಿದೆ.

ಆಸ್ಟ್ರೇಲಿಯ ಕಾನೂನಿನ ಲೋಪದೋಷದ ಮೇಲೆ ಈ ಪ್ರಕರಣ ಬೆಳಕು ಚೆಲ್ಲಿದೆ. ರೋಗಿಗಳಿಗೆ ಜೀವವುಳಿಸುವಂತ ಚಿಕಿತ್ಸೆ ನಿರಾಕರಿಸುವ ಹಕ್ಕಿದೆ. ಆದರೆ ಇನ್ನೊಬ್ಬ ವ್ಯಕ್ತಿಗೆ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ತಪ್ಪಿಗೆ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ರೊಸೆಟ್ಟಿಯರ್‌ಗೆ ತಮ್ಮ ಚಿಕಿತ್ಸೆ ನಿರಾಕರಿಸುವ ಸಂಪೂರ್ಣ ಹಕ್ಕಿದೆಯೆಂದು ಕೋರ್ಟ್ ತಿಳಿಸಿತು. ಚಿಕಿತ್ಸೆ ನಿರಾಕರಿಸುವ ಹಕ್ಕನ್ನು ದಯಪಾಲಿಸುವ ಈ ತೀರ್ಪು ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳಿಗೆ ವರದಾನವೆಂದು ಹ್ಯಾಮಂಡ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ