ಇಸ್ಲಾಮಾಬಾದ್, ಸೋಮವಾರ, 21 ಸೆಪ್ಟೆಂಬರ್ 2009( 19:38 IST )
ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ಸೆಪ್ಟೆಂಬರ್ 27ರಂದು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಲಿದ್ದು, ಪಾಕ್ ನೆಲದಿಂದ ಭಯೋತ್ಪಾದನೆ ಹೊರಹೊಮ್ಮುತ್ತಿರುವುದು ಪರಾಮರ್ಶೆಗೆ ಒಳಪಡಲಿದೆ.
ಮುಂಬೈ ದಾಳಿಗಳ ಕಾರಣಕರ್ತರ ವಿರುದ್ಧ ಪಾಕಿಸ್ತಾನದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಚರ್ಚೆಯ ಮುಖ್ಯವಸ್ತುವಾಗಲಿದೆ. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಸಭೆಯ ನೇಪಥ್ಯದಲ್ಲಿ ಈ ಭೇಟಿ ನಡೆಯುತ್ತಿದ್ದು, ಉಭಯ ರಾಷ್ಟ್ರಗಳ ನಡುವೆ ಪ್ರಥಮ ಉನ್ನತ ಮಟ್ಟದ ಭೇಟಿಯಾಗಿದೆ. ಈ ಸಭೆಗೆ ಅಡಿಪಾಯ ಹಾಕುವುದಕ್ಕಾಗಿ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ಸೆಪ್ಟೆಂಬರ್ 26ರಂದು ಭೇಟಿಯಾಗಲಿದ್ದು, ಈ ಸಂದರ್ಭದಲ್ಲಿ ಸಲ್ಮಾನ್ ಬಷೀರ್ ಭಾರತದ ಸಹವರ್ತಿ ನಿರುಪಮಾ ರಾವ್ ಜತೆ ಉಭಯ ರಾಷ್ಟ್ರಗಳ ನಡುವೆ ಭಯೋತ್ಪಾದನೆ ಮತ್ತು ಕಾಶ್ಮೀರ ವಿವಾದ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚಿಸಲಿದ್ದಾರೆ.
ಶರ್ಮ್ ಎಲ್ ಷೇಕ್‌ನಲ್ಲಿ ಪಾಕ್ ಮತ್ತು ಭಾರತದ ಪ್ರಧಾನಿಗಳ ನಡುವೆ ಮಾತುಕತೆಯಲ್ಲಿ ಮೂಡಿದ ಒಪ್ಪಂದದ ಅನ್ವಯ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ನಡೆಯಲಿದೆಯೆಂದು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ತಿಳಿಸಿದ್ದಾರೆ.ಸ್ಥಗಿತಗೊಂಡ ಶಾಂತಿ ಪ್ರಕ್ರಿಯೆ ಆರಂಭಿಸಬೇಕೆಂದು ಪಾಕಿಸ್ತಾನ ಭಾರತಕ್ಕೆ ಕೋರಿದೆ.
ಆದರೆ ಪಾಕ್ ತನ್ನ ನೆಲವನ್ನು ಭಯೋತ್ಪಾದನೆ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ಲವೆಂಬ ಬದ್ಧತೆ ಪೂರೈಸಿದರೆ ಮಾತ್ರ ಇಸ್ಲಾಮಾಬಾದ್ ಜತೆ ಅರ್ಥಪೂರ್ಣ ಮಾತುಕತೆ ಸಾಧ್ಯವೆಂದು ಭಾರತ ಪ್ರತಿಪಾದಿಸುತ್ತಿದೆ.