ಆಫ್ಘಾನಿಸ್ತಾನದಲ್ಲಿ ಪಡೆಗಳನ್ನು ನಿಯೋಜಿಸಿರುವ ಜರ್ಮನಿ ರಾಷ್ಟ್ರದ ಮೇಲೆ ದಾಳಿಗಳನ್ನು ನಡೆಸುವುದಾಗಿ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಆನ್‌ಲೈನ್ ವಿಡಿಯೊದಲ್ಲಿ ಎರಡನೇ ಬಾರಿಗೆ ಬೆದರಿಕೆ ಹಾಕಿದೆ. ಅಲ್ ಖಾಯಿದಾದಿಂದ ಸಂದೇಶ ಕಳಿಸಿದವನನ್ನು ಜರ್ಮನ್-ಮೊರೊಕ್ಕೊ ಪೌರ ಬೆಕ್ಕೆ ಹರಾಕ್ ಎಂದು ಒಳಾಡಳಿತ ಸಚಿವಾಲಯ ಗುರುತಿಸಿದೆ.
ಆಫ್ಘಾನಿಸ್ತಾನದಲ್ಲಿ ಜರ್ಮನಿ ಯುದ್ಧಕ್ಕೆ ತೆರೆಎಳೆಯದಿದ್ದರೆ ಗಂಡಾಂತರ ಎದುರಿಸಬೇಕಾಗುತ್ತದೆಂದು ಶುಕ್ರವಾರ ಅವನು ವಿಡಿಯೊದಲ್ಲಿ ಎಚ್ಚರಿಸಿದ್ದಾನೆ.ವಿಡಿಯೊದಲ್ಲಿ 32ರ ಪ್ರಾಯದ ಹರಾಕ್ ಮುಖವಾಡ ಧರಿಸಿದ್ದನೆಂದು ಜರ್ಮನಿ ಮಾಧ್ಯಮ ತಿಳಿಸಿದೆ.ಸೆ.27ರಂದು ಜರ್ಮನಿಯ ಫೆಡರಲ್ ಚುನಾವಣೆ ಬಳಿಕ ದಾಳಿಗಳು ನಡೆಯುತ್ತದೆಂದು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರನ್ನು ನೇರವಾಗಿ ಉದ್ದೇಶಿಸಿ ತನ್ನ ಮುಂಚಿನ ವಿಡಿಯೊಚಿತ್ರದಲ್ಲಿ ಎಚ್ಚರಿಕೆ ನೀಡಿದ್ದ ಹರಾಕ್ ಸೂಟ್ ಧರಿಸಿದ್ದ ಮತ್ತು ನುಣುಪಾಗಿ ಮುಖಕ್ಷೌರ ಮಾಡಿದ್ದ.
ಪ್ರಜಾಪ್ರಭುತ್ವದಲ್ಲಿ ಜನರು ಮಾತ್ರ ಸೈನಿಕರಿಗೆ ಮನೆಗೆ ಮರುಳುವಂತೆ ಹೇಳಬಹುದು ಎಂದು ಹರಾಕ್ ಪ್ರಥಮ ವಿಡಿಯೊದಲ್ಲಿ ತಿಳಿಸಿದ್ದ. ಜರ್ಮನಿ ಈ ವಾರಾಂತ್ಯದಲ್ಲಿ ವಿಮಾನನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ದಾಳಿಗಳ ಅಪಾಯದ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಿದೆ. ಆಫ್ಘಾನಿಸ್ತಾನದಲ್ಲಿ ಪಡೆಗಳ ನಿಯೋಜನೆಯಿಂದ ಜರ್ಮನಿಯನ್ನು ಶಿಕ್ಷಿಸಲು ಚುನಾವಣೆಯನ್ನು ಉಗ್ರಗಾಮಿ ಗುಂಪುಗಳು ವೇದಿಕೆಯಾಗಿ ಬಳಸಬಹುದೆಂದು ಜರ್ಮನಿ ಶಂಕಿಸಿದೆ.