ನ್ಯೂಯಾರ್ಕ್, ಮಂಗಳವಾರ, 22 ಸೆಪ್ಟೆಂಬರ್ 2009( 10:28 IST )
ಮುಂಬೈ ಭಯೋತ್ಪಾದನೆಯ ಸೂತ್ರಧಾರಿ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ರಕ್ಷಿಸುವ ಕ್ರಮಗಳಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲವೆಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದು, ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರಿಗೆ ಶಿಕ್ಷೆ ವಿಧಿಸಲೇಬೇಕೆಂದು ಅವರು ಪಟ್ಟುಹಿಡಿದರು .
ಕೇಂದ್ರ ಎಸ್.ಎಂ.ಕೃಷ್ಣ ಅವರು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಸಭೆಯ ನೇಪಥ್ಯದಲ್ಲಿ ಪಾಕಿಸ್ತಾನದ ಸಹವರ್ತಿ ಜತೆ ನಿರೀಕ್ಷಿತ ಮಾತುಕತೆಗೆ ಮುನ್ನ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಎನ್‌ಡಿಟಿವಿಯ ಸಾರಾ ಜಾಕೊಬ್ ಜತೆ ಮಾತನಾಡುತ್ತಿದ್ದ ಕೃಷ್ಣ, ಹಫೀಜ್ ಸಯೀದ್ ಗೃಹಬಂಧನದಲ್ಲಿ ಇರಿಸಿರುವ ಪಾಕಿಸ್ತಾನ ಕ್ರಮದಿಂದ ಭಾರತಕ್ಕೆ ತೃಪ್ತಿಯಾಗಿದೆಯೇ ಎಂಬ ಪ್ರಶ್ನೆಗೆ, ಸಯೀದ್ ಬಗ್ಗೆ ವಿಭಿನ್ನ ವರದಿಗಳು ಬರುತ್ತಿವೆ. ವಾಸ್ತವ ಪರಿಸ್ಥಿತಿಯ ಬಗ್ಗೆ ಪೂರ್ಣ ವರದಿಗಾಗಿ ತಾವು ಕಾಯುತ್ತಿರುವುದಾಗಿ ಅವರು ನುಡಿದರು.
ಮುಂಬೈ ಭಯೋತ್ಪಾದನೆ ದಾಳಿಗೆ ಕಾರಣಕರ್ತರನ್ನು ಹೊಣೆಯಾಗಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ತಮ್ಮ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆ ನಿಲುವನ್ನು ತಾವು ಪುನರುಚ್ಚರಿಸುವುದಾಗಿ ಕೃಷ್ಣ ಹೇಳಿದರು.ಸಯೀದ್ ಮಾಡಿದ ಕೆಲವು ಪ್ರಚೋದನಾಕಾರಿ ಭಾಷಣದ ಆರೋಪದ ಮೇಲೆ ಅವನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಆದರೆ ಮುಂಬೈ ಭಯೋತ್ಪಾದನೆ ದಾಳಿಗೆ ಸಂಬಂಧಿಸಿದಂತೆ ಸಯೀದ್ ವಿರುದ್ಧ ಪಾಕಿಸ್ತಾನ ಯಾವ ಕ್ರಮ ಕೈಗೊಳ್ಳುತ್ತದೆಂಬ ಬಗ್ಗೆ ಭಾರತ ಆಸಕ್ತಿ ತಾಳಿದೆ. ಮುಂಬೈ ದಾಳಿಯ ಹಿಂದಿನ ಮೆದುಳು ಸಯೀದ್ ಆಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದೆಂದು ನಿರೀಕ್ಷಿಸುವುದಾಗಿ ಅವರು ನುಡಿದಿದ್ದಾರೆ.