ಮುಂಬೈ ಭಯೋತ್ಪಾದನೆ ಸೂತ್ರಧಾರಿ ಮತ್ತು ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್ ವಿರುದ್ದ ಎರಡು ಎಫ್‌ಐಆರ್‌ಗಳು ಮತ್ತು ಅವನ ಚಲನವಲನಗಳ ಮೇಲೆ ನಿರ್ಬಂಧ ಪಾಕಿಸ್ತಾನದ ಕಣ್ಣೊರೆಸುವ ತಂತ್ರವಲ್ಲದೇ ಮತ್ತೇನೂ ಅಲ್ಲವೆಂದು ತಿಳಿದುಬಂದಿದೆ.
ಪಾಕಿಸ್ತಾನದ ಸೇನೆಗೆ ಸಯೀದ್ ಮೌಲ್ಯಯುತ ಆಸ್ತಿಯಾಗಿ ಉಳಿದಿದ್ದು, ಸೇನೆಯ 10ನೇ ತುಕಡಿಯು ಆತಿಥ್ಯವಹಿಸಿದ್ದ ಇಫ್ತಾರ್ ಕೂಟದಲ್ಲಿ ಸಯೀದ್ ಸೇನೆಯ ಗೌರವಾನ್ವಿತ ಅತಿಥಿಯಾಗಿದ್ದನೆಂದು ತಿಳಿದುಬಂದಿದೆ.ಸೆಪ್ಟೆಂಬರ್ 12ರಂದು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಜೆಯುಡಿ ಮುಖಂಡ ಹಾಜರಿದ್ದನೆಂದು ಹೇಳಲಾಗಿದ್ದು, 10ನೇ ತುಕಡಿಯು ರಾವಲ್ಪಿಂಡಿಯಲ್ಲಿ ಮುಖ್ಯಕಚೇರಿ ಹೊಂದಿದೆ. ನಿಯಂತ್ರಣ ರೇಖೆಯಲ್ಲಿ ಜಮ್ಮು ಕಾಶ್ಮೀರದೊಳಕ್ಕೆ ಅತಿಕ್ರಮಣಕಾರರನ್ನು ತಳ್ಳುವ ಕಾಯಕದಲ್ಲಿ 10ನೇ ತುಕಡಿ ಮುಖ್ಯ ಪಾತ್ರವಹಿಸಿತ್ತೆಂದು ತಿಳಿದುಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಬಳಸಿಕೊಳ್ಳಲು ಲಷ್ಕರೆ ತೊಯ್ಬಾ ಜಿಹಾದಿಗಳನ್ನು ಪ್ರಮುಖವಾಗಿ ನೇಮಿಸಿಕೊಂಡು ತರಬೇತಿ ನೀಡುತ್ತಿದೆ. ಸೇನೆಯ ಇಫ್ತಾರ್ ಕೂಟದಲ್ಲಿ ಸಯೀದ್ ಉಪಸ್ಥಿತಿಯಿಂದ, ಮುಂಬೈ ದಾಳಿಯ ಸೂತ್ರಧಾರನ ಮೇಲೆ ಕ್ರಮಕ್ಕೆ ಪಾಕಿಸ್ತಾನ ಎಷ್ಟರಮಟ್ಟಿಗೆ ಆಸಕ್ತಿತಾಳಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಜೆಯುಡಿ ಮುಖಂಡ ವಸ್ತುಶಃ ಮಿಲಿಟರಿ-ಐಎಸ್‌ಐ ವ್ಯವಸ್ಥೆಯ ಭಾಗವಾಗಿದ್ದು, ಜಮ್ಮು ಕಾಶ್ಮೀರ ಗಡಿಯ ವಲಯಗಳಲ್ಲಿ ಸೇನೆಯ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಸಯೀದ್ ಅಭಿಪ್ರಾಯ ಕೂಡ ಪರಿಗಣಿಸಲಾಗುತ್ತಿದೆ.ಸಯೀದ್‌ನ ಎಲ್‌ಇಟಿಯು ವಿಶ್ವಸಂಸ್ಥೆಯಿಂದ ಭಯೋತ್ಪಾದನೆ ಸಂಘಟನೆಯೆಂಬ ಹಣೆಪಟ್ಟಿ ಹೊತ್ತಿದ್ದರೂ, ಮಿಲಿಟರಿ ವರ್ಗ ದೃತಿಗೆಡದೇ ಸಯೀದ್‌ಗೆ ಆತಿಥ್ಯ ವಹಿಸಿದ್ದು, ಪಾಕಿಸ್ತಾನದ ಸೇನೆಯ ಜತೆ ಅವನ ನಂಟಿಗೆ ಸಾಕ್ಷ್ಯ ಒದಗಿಸಿದೆ.
ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಿ, ಈದ್ ಪ್ರಾರ್ಥನೆಯಿಂದ ನಿಷೇಧಿಸಲಾಯಿತೆಂದು ಲಾಹೋರ್ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಜೆಯುಡಿ ಮುಖಂಡನ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಹೇಳಲಾಗಿದ್ದು, ಭಯೋತ್ಪಾದನೆ ಬೆದರಿಕೆಗಳ ಹಿನ್ನೆಲೆಯಲ್ಲಿ ಅವನಿಗೆ ಭದ್ರತೆ ಖಾತರಿ ಮಾಡಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.