ನ್ಯೂಯಾರ್ಕ್, ಮಂಗಳವಾರ, 22 ಸೆಪ್ಟೆಂಬರ್ 2009( 16:11 IST )
13 ವರ್ಷ ವಯಸ್ಸಿನ ಭಾರತೀಯ ಬಾಲಕಿ ಯುಗರತ್ನ ಶ್ರೀವಾಸ್ತವಗೆ ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವ ಸುಯೋಗ ಸಿಕ್ಕಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಯುಗರತ್ನಗೆ ಈ ಆಹ್ವಾನ ನೀಡಿದ್ದಾರೆ.ಯುಗರತ್ನ ಕೇವಲ 13ರ ಬಾಲೆಯಾಗಿದ್ದರೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಚೀನಾ ಅಧ್ಯಕ್ಷ ಹು ಜಿಂಟಾವೊ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ತನ್ನ ಸಂದೇಶವನ್ನು ಮುಟ್ಟಿಸಲಿದ್ದಾಳೆ.
'ರಾಜಕಾರಣಿಗಳೇ ದಯವಿಟ್ಟು ನಮ್ಮ ಧ್ವನಿಗಳನ್ನು ಕೇಳಿ. ಭವಿಷ್ಯವು ದೃಢ ಮುನ್ನೋಟ ಮತ್ತು ನಾಯಕತ್ವದ ಅಗತ್ಯವನ್ನು ಹೊಂದಿದೆ. ಮಕ್ಕಳಾದ ನಾವು ಮತ್ತು ಯುವಜನಾಂಗ ಮುಂದಿನ ಜಗತ್ತಿನ ವಾರಸುದಾರರಾಗುತ್ತೇವೆ. ಆದ್ದರಿಂದ ನಿಮ್ಮ ನಿರ್ಧಾರಗಳಲ್ಲಿ ನಮ್ಮ ಧ್ವನಿಗಳನ್ನೂ ಸೇರಿಸಿಕೊಳ್ಳುವುದು ಅಗತ್ಯವಾಗಿದ್ದು, ಬಳಿಕವೇ ನೀವು ಕಾರ್ಯಪ್ರವೃತ್ತರಾಗಬೇಕು. ಪ್ರತಿಯೊಂದು ರಾಷ್ಟ್ರವೂ ತಾಪಮಾನ ಹೆಚ್ಚಳಕ್ಕೆ ಪರಿಹಾರ ಕಂಡುಹಿಡಿಯಬಹುದು. ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಡೀ ಜಗತ್ತಿಗೆ ಸಂಬಂಧಪಟ್ಟಂತ ವಿಷಯ' ಎಂದು ಯುಗರತ್ನ ಹೇಳಿದ್ದಾಳೆ.
2008ರಲ್ಲಿ ಯುಗರತ್ನ ಮರಗಳ ಪುನಶ್ಚೇತನಕ್ಕೆ ಕೆಲಸ ಮಾಡುವ ಲಕ್ನೊ ಎನ್‌ಜಿಒ ಸದಸ್ಯಳಾಗಿದ್ದು, ಯುಎನ್‌ಇಪಿ ನಾರ್ವೆಯಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಭಾಗವಹಿಸಿ, ಕಿರಿಯ ಮಂಡಳಿಯ ಸದಸ್ಯೆಯಾದಳು. ಯುಗರತ್ನಳ ಪರಿಸರ ಕ್ರಿಯಾಶೀಲತೆಯು ಯುಎನ್‌ಇಪಿ ಗಮನಸೆಳೆಯಿತು. ಯುಗರತ್ನ ಮಂಗಳವಾರ ಪ್ರಧಾನ ಅಸೆಂಬ್ಲಿಯ ವಿಶ್ವ ನಾಯಕರ ಮುಂದೆ ಜಗತ್ತಿನ ಅಸಂಖ್ಯಾತ ಮಕ್ಕಳ ಪ್ರತಿನಿಧಿಯಾಗಿ ಡಿಸೆಂಬರ್‌ನಲ್ಲಿ ಕೊಫೆನ್‌ಹ್ಯಾಗನ್ ಸಮ್ಮೇಳನದಲ್ಲಿ ನಿಖರ ಹವಾಮಾನ ಬದಲಾವಣೆಗೆ ಸಹಿ ಹಾಕುವಂತೆ ಮನವಿ ಮಾಡಲಿದ್ದಾಳೆ.