ಭಾರತದ ಜತೆ ಮಾತುಕತೆ ಪ್ರಕ್ರಿಯೆ ಆರಂಭಿಸಬೇಕೆಂದು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಕೋರಿದ್ದು, ವಲಯದ ಉತ್ತಮ ಹಿತಾಸಕ್ತಿ ದೃಷ್ಟಿಯಿಂದ ಇಂತಹ ಕ್ರಮ ಅಗತ್ಯವೆಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ವಾರ್ಷಿಕ ಸಭೆಗೆ ಭಾನುವಾರ ಆಗಮಿಸಿದ್ದ ಜರ್ದಾರಿ, ಅಮೆರಿಕದ ಮಾಜಿ ಅಧ್ಯಕ್ಷ ಬಿನ್ ಕ್ಲಿಂಟನ್ ಜತೆ ಸೋಮವಾರ ಸಂಜೆ ಭೇಟಿ ಮಾಡಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ನಿರ್ದಯವಾದ ಮುಂಬೈ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ಜತೆ ಜಂಟಿ ಮಾತುಕತೆ ಸ್ಥಗಿತಗೊಳಿಸಿದ್ದು, ಮುಂಬೈ ದಾಳಿಗೆ ಲಷ್ಕರೆ ತೊಯ್ಬಾ ಉಗ್ರಗಾಮಿ ಸಂಘಟನೆಯೇ ಕಾರಣವೆಂದು ಟೀಕಿಸಿದೆ. ಆದರೆ ಮುಂಬೈ ದಾಳಿಯ ಸೂತ್ರಧಾರಿ ಸಯೀದ್ ಮೇಲೆ ಕ್ರಮ ಕೈಗೊಳ್ಳಲು ಪಾಕಿಸ್ತಾನ ಹಿಂದೇಟು ಹಾಕುತ್ತಿದೆ.
ಸುಮಾರು 40 ನಿಮಿಷಗಳ ಕಾಲ ನಡೆದ ಕ್ಲಿಂಟನ್-ಜರ್ದಾರಿ ಭೇಟಿಯಲ್ಲಿ, ಉಭಯ ನಾಯಕರು ಭಯೋತ್ಪಾದಕತೆ, ಪಾಕಿಸ್ತಾನ-ಅಮೆರಿಕ ಸಂಬಂಧ, ಭಾರತ-ಪಾಕ್ ಸಂಬಂಧ ಮತ್ತು ವಲಯದ ಪರಿಸ್ಥಿತಿ ಮುಂತಾದ ವಿಷಯ ಕುರಿತು ಚರ್ಚಿಸಿದರೆಂದು ಪಾಕ್ ಅಧ್ಯಕ್ಷರ ವಕ್ತಾರ ಫರಾತುಲ್ಲಾ ಬಾಬರ್ ತಿಳಿಸಿದ್ದಾರೆ.
ಭಾರತ-ಪಾಕ್ ಸಂಬಂಧಗಳ ಕುರಿತಂತೆ ಮಾತನಾಡಿದ ಜರ್ದಾರಿ, ಜಂಟಿ ಮಾತುಕತೆ ಆರಂಭವು ವಲಯದ ಹಿತಾಸಕ್ತಿಗೆ ಒಳ್ಳೆಯದೆಂದು ಹೇಳಿದರೆಂದು ಪಾಕಿಸ್ತಾನ ವಕ್ತಾರರ ಹೇಳಿಕೆ ಉಲ್ಲೇಖಿಸಿ ಎಪಿಪಿ ಸುದ್ದಿ ಏಜೆನ್ಸಿ ವರದಿ ಮಾಡಿದೆ. ಪಾಕಿಸ್ತಾನವು ಯಾವುದೇ ದೇಶದ ವಿರುದ್ಧ ತನ್ನ ಪ್ರದೇಶ ಬಳಸಲು ಅವಕಾಶ ನೀಡುವುದಿಲ್ಲವೆಂದು ಜರ್ದಾರಿ ಪುನರುಚ್ಚರಿಸಿದರು.
ಏತನ್ಮಧ್ಯೆ, ಪಾಕಿಸ್ತಾನ ವಾಯವ್ಯ ಪ್ರದೇಶದಲ್ಲಿ ಅಮೆರಿಕದ ಕ್ಷಿಪಣಿ ದಾಳಿಗಳ ಬಗ್ಗೆ ಜರ್ದಾರಿ ಆತಂಕ ವ್ಯಕ್ತಪಡಿಸಿದರು. ಇಸ್ಲಾಮಾಬಾದ್‌ಗೆ ಅಮೆರಿಕ ಡ್ರೋನ್ ತಂತ್ರಜ್ಞಾನ ಒದಗಿಸಿದರೆ ಸ್ವತಃ ಉಗ್ರಗಾಮಿಗಳ ವಿರುದ್ಧ ಡ್ರೋನ್ ಬಳಸುವುದಾಗಿ ಅವರು ಹೇಳಿದರು.