ಇಸ್ಲಾಮಿಕ್ ರಿಪಬ್ಲಿಕ್ ಮೇಲೆ ದಾಳಿ ಮಾಡಲಿಚ್ಛಿಸುವ ಕೈಗಳನ್ನು ಇರಾನ್ ಮಿಲಿಟರಿ ಕಡಿದುಹಾಕುವುದೆಂದು ಇರಾನ್ ಅಧ್ಯಕ್ಷ ಅಹ್ಮದಿ ನೆಜಾದ್ ಮಂಗಳವಾರ ಗುಡುಗಿದ್ದಾರೆ. ಇಸ್ಲಾಮಿಕ್ ಗಣರಾಜ್ಯವನ್ನು ದುರ್ಬಲವೆಂದು ಭಾವಿಸಿ, ರಾಷ್ಟ್ರದ ವಿರುದ್ಧ ಧೈರ್ಯವಿದ್ದರೆ ಸಮರ ಮಾಡಿ ಎಂದು ವಿಶ್ವಶಕ್ತಿಗಳಿಗೆ ಸವಾಲು ಹಾಕಿದ್ದಾರೆ.
ಇರಾನ್-ಇರಾಕ್ ಯುದ್ಧದ ವಾರ್ಷಿಕದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇರಾನ್ ವಿರುದ್ದ ಯಾವುದೇ ಆಕ್ರಮಣ ನಡೆಸಲು ಯಾವುದೇ ಶಕ್ತಿ ಯೋಚಿಸುವಷ್ಟು ಧೈರ್ಯವಿಲ್ಲವೆಂದು ಹೇಳಿದರು. ಅಮೆರಿಕ ಪ್ರಾಬಲ್ಯದ ವಿಶ್ವಶಕ್ತಿಗಳನ್ನು ಉದ್ದೇಶಿಸಿ ಬಂಡಾಯದ ಪ್ರತಿಕ್ರಿಯೆ ನೀಡಿದ ಅಹ್ಮದಿ ನೆಜಾದ್, ಇರಾನ್ ವಿರುದ್ಧ ಯಾವುದೇ ನಕಾರಾತ್ಮಕ ಚಟುವಟಿಗೆ ಕೆಟ್ಟ ಗತಿ ಎದುರಿಸಿತ್ತೀರೆಂದು ಎಚ್ಚರಿಸಿದ್ದಾರೆ.
ನಾವು ನಿಶಾಚರ ಶಕ್ತಿಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ. ನಮ್ಮ ವಿರುದ್ಧ ಯಾರೇ ಗುಂಡು ಹಾರಿಸಲು ಯತ್ನಿಸಿದರೂ, ನಾವು ಅವರ ಕೈಗಳನ್ನು ಕತ್ತರಿಸುತ್ತೇವೆಂದು ಅವರು ನುಡಿದರು. ಇರಾನ್ ಮಿಲಿಟರಿ ಬಲದ ಬಗ್ಗೆ ವಿಶ್ವಾಸಪೂರಿತರಾಗಿ ಮಾತನಾಡಿದ ಅವರು,ಇರಾನಿ ಜನರು ತಮ್ಮ ಹಕ್ಕುಗಳನ್ನು ಮತ್ತು ನೆಲವನ್ನು ಬಲವಾಗಿ ರಕ್ಷಿಸುತ್ತಾರೆಂದು ಅವರು ತಿಳಿಸಿದರು.