ಇಸ್ಲಾಮಾಬಾದ್, ಬುಧವಾರ, 23 ಸೆಪ್ಟೆಂಬರ್ 2009( 20:52 IST )
ಪಾಕಿಸ್ತಾನದಿಂದ 'ಹಳೆ ಪಾತ್ರಾ... ಹಳೆ ಕಬ್ಬಿಣಾ..'. ರಾಗ ಮತ್ತೆ ಬಂದಿದೆ. ನಡುನಡುವೆ ಅಪಶ್ರುತಿಯನ್ನೂ ಬೆರೆಸುವ ಅದರ ಚಾಳಿ ಮುಂದುವರಿದಿದೆ. ಒಂದೆಡೆ, ಸಂಬಂಧ ಸುಧಾರಿಸಲು ಭಾರತದೊಂದಿಗೆ ಮಾತುಕತೆ ನಡೆಯಬೇಕು ಎಂದು ಆ ದೇಶದ ಪ್ರಧಾನಮಂತ್ರಿ ಮತ್ತು ಅಧ್ಯಕ್ಷರು ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ, ಒಳಾಡಳಿತ ಸಚಿವ ರಹಮಾನ್ ಮಲಿಕ್, ತನ್ನ ದೇಶದ ಭಯೋತ್ಪಾದನೆಗೆ ಭಾರತ ಪ್ರಚೋದನೆ ನೀಡುತ್ತಿದೆ ಎಂಬ ಹಳೇ ರಾಗ ಪುನಃ ಹಾಡತೊಡಗಿದ್ದಾರೆ.
ಹೌದು. ಸ್ವಾಟ್ ಕಣಿವೆ ಮತ್ತು ನಮ್ಮ ದೇಶದ ಬುಡಕಟ್ಟು ಪ್ರದೇಶಗಳಿಂದ ಬಂಧಿತರಾಗಿರುವ ಉಗ್ರಗಾಮಿಗಳು, ಪಾಕಿಸ್ತಾನೀ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾರತೀಯರ ಪಾತ್ರವನ್ನು ದೃಢಪಡಿಸಿದ್ದಾರೆ ಎಂದು ಮಲಿಕ್ ಅವರು ಖಾಸಗಿ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಭಾರತ-ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳು, ಆ ಬಳಿಕ ವಿದೇಶಾಂಗ ಸಚಿವರುಗಳ ಸಭೆಗೆ ಮುನ್ನ ಈ ಅಪಶ್ರುತಿ ಕೇಳಿಬಂದಿದ್ದು, ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಮತ್ತು ಮಾತುಕತೆಯಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚು ಒತ್ತಡ ಬೀಳದಂತೆ ತಡೆಯುವುದಕ್ಕಾಗಿ, ಮಾತುಕತೆಯ ದಾರಿ ತಪ್ಪಿಸುವ ಉದ್ದೇಶದಿಂದ ಪಾಕಿಸ್ತಾನ ಈ ವಿಭಿನ್ನ ಧ್ವನಿಗಳನ್ನು ಹೊರಡಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತವು ಯಾವತ್ತಿಗೂ ನಮ್ಮ ಮೇಲೆ ಗೂಬೆ ಕೂರಿಸುವಾಗ ನಾವು ಪ್ರಬಲವಾಗಿ ಅದಕ್ಕೆ ಪ್ರತಿಸ್ಪಂದಿಸಿದ್ದೇವೆ. ಮುಂಬೈ ದಾಳಿಯ ರೂವಾರಿಗಳನ್ನು ಬಂಧಿಸಲು ಪಾಕಿಸ್ತಾನದ 'ಪ್ರಾಮಾಣಿಕ' ಪ್ರಯತ್ನಗಳಿಗೆ ಭಾರತವು ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಮಲಿಕ್ ದೂರಿದ್ದಾರೆ.
ಈ ಮೊದಲು, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು, ಸೌಹಾರ್ದ ಸಂಬಂಧ ಮುಂದುವರಿಯಲು ಮಾತುಕತೆ ಅಗತ್ಯ ಎಂದು ಪ್ರತಿಪಾದಿಸಿದ್ದರು.