ವಿಶ್ವಸಂಸ್ಥೆ, ಗುರುವಾರ, 24 ಸೆಪ್ಟೆಂಬರ್ 2009( 11:57 IST )
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬಲಿಷ್ಠ ಶಕ್ತಿಗಳನ್ನು ಸೇರ್ಪಡೆ ಮಾಡಲು ಲಿಬ್ಯಾದ ನಾಯಕ ಮುಹಮ್ಮರ್ ಅಲ್ ಗಡಾಫಿ ವಿರೋಧಿಸಿದ್ದಾರೆ. ಈ ಕ್ರಮದಿಂದಾಗಿ ಶಕ್ತಿ ಸಮತೋಲನ ಇನ್ನಷ್ಟು ವಾಲುತ್ತದೆಂದು ಗಡಾಫಿ ಹೇಳಿದ್ದಾರೆ. ಕಾಶ್ಮೀರದ ಬಗ್ಗೆ ಮಾತನಾಡಿದ ಗಡಾಫಿ, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕಾಶ್ಮೀರ ಸ್ವತಂತ್ರ ರಾಜ್ಯವಾಗಬೇಕೆಂದು ಪ್ರತಿಕ್ರಿಯಿಸಿದ್ದಾರೆ.
ಕಾಶ್ಮೀರ ಸ್ವತಂತ್ರ ರಾಜ್ಯವಾಗಬೇಕು. ಅದು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿರಬಾರದು ಎಂದು ಪ್ರಧಾನ ಅಸೆಂಬ್ಲಿಯಲ್ಲಿ ವಿತರಿಸಲಾದ ಲಿಖಿತ ಹೇಳಿಕೆಯಲ್ಲಿ ಲಿಬ್ಯಾದ ನಾಯಕರು ತಿಳಿಸಿದ್ದಾರೆ. ಜನರಲ್ ಅಸೆಂಬ್ಲಿಗೆ ತಮ್ಮ ಪ್ರಥಮ ಭಾಷಣದಲ್ಲಿ ಮಾತನಾಡಿದ ಅವರು, ಯುಎನ್‌ಎಸ್‌ಸಿಯನ್ನು ದೊಡ್ಡ ಶಕ್ತಿಗಳಿಗೆ ಬಾಗಿಲು ತೆರೆಯುವುದರಿಂದ ವಿಶ್ವಮಟ್ಟದಲ್ಲಿ ಇನ್ನಷ್ಟು ಬಡತನ, ಅನ್ಯಾಯ ಮತ್ತು ಹೆಚ್ಚಿನ ಉದ್ವಿಗ್ನತೆಗೆ ದಾರಿಯಾಗುತ್ತದೆಂದು ಅವರು ಹೇಳಿದರು.
ಯುಎನ್‌ಎಸ್‌ಸಿ ಸ್ಥಾನಕ್ಕೆ ಇಟಲಿ, ಜರ್ಮನಿ, ಇಂಡೊನೇಶಿಯ, ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಜಪಾನ್, ಅರ್ಜೆಂಟಿನಾ, ಬ್ರೆಜಿಲ್ ನಡುವೆ ತೀವ್ರ ಸ್ಪರ್ಧೆಯಿದೆಯೆಂದು ಗಡಾಫಿ ಒಂದೂವರೆ ಗಂಟೆಗಳ ಭಾಷಣದಲ್ಲಿ ಹೇಳಿದರು.ಸದಸ್ಯ ರಾಷ್ಟ್ರಗಳ ನಡುವೆ ಸಮಾನತೆ ಕಾಯ್ದುಕೊಳ್ಳಬೇಕೆಂದು ಗಡಾಫಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಕ್ತಿ ರಾಷ್ಟ್ರಗಳಾಗಿದ್ದು, ಭಾರತಕ್ಕೆ ಸ್ಥಾನ ನೀಡಿದರೆ ಪಾಕಿಸ್ತಾನಕ್ಕೆ ಕೂಡ ಸ್ಥಾನ ಕಲ್ಪಿಸಬೇಕಾಗುತ್ತದೆಂದು ನುಡಿದರು. ಆಫ್ರಿಕಾ ಒಕ್ಕೂಟದ ಅಧ್ಯಕ್ಷರಾದ ಗಡಾಫಿ, ವೇದಿಕೆ ಏರುತ್ತಿದ್ದಂತೆ ಕಿಂಗ್ ಆಫ್ ಕಿಂಗ್ಸ್ ಎಂದು ಅವರನ್ನು ಬಣ್ಣಿಸಲಾಯಿತು. ಕಂದುಬಣ್ಣದ ನಿಲುವಂಗಿ ಮತ್ತು ಕಪ್ಪು ಹ್ಯಾಟ್ ಧರಿಸಿದ್ದ ಅವರು, ಲಿಖಿತ ಭಾಷಣ ಓದಿದರು.