ನಿಷೇಧಿತ ಜೆಯುಡಿ ಮುಖ್ಯಸ್ಥ ಮತ್ತು ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರಿ ಎಂದು ಭಾರತ ಆರೋಪಿಸಿರುವ ಹಫೀಜ್ ಮಹಮದ್ ಸಯೀದ್ ಪಾಕಿಸ್ತಾನ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದು, ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ದಾಖಲು ಮಾಡಲಾದ ಎರಡು ನಕಲಿ ಪ್ರಕರಣಗಳನ್ನು ವಜಾ ಮಾಡುವಂತೆ ಕೋರಿದ್ದಾನೆ.
ಫೈಸಲಾಬಾದ್‌ನಲ್ಲಿ ಕಳೆದ ವಾರ ಜೆಯುಡಿ ಮುಖ್ಯಸ್ಥನ ವಿರುದ್ಧ ಸಲ್ಲಿಸಲಾದ ಪ್ರಥಮ ಮಾಹಿತಿ ವರದಿಯು ಯಾವುದೇ ಕಾನೂನಾತ್ಮಕ ಅಧಿಕಾರ ಮತ್ತು ಕಾನೂನಾತ್ಮಕ ಪರಿಣಾಮವಿಲ್ಲದ್ದು ಎಂದು ಸಯೀದ್ ವಕೀಲ ದೋಗಾರ್ ಹೇಳಿದ್ದಾರೆ. ಸಯೀದ್ ವಿರುದ್ಧ ಯಾವುದೇ ಆರೋಪವಿಲ್ಲದಿದ್ದರೂ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆಯೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ನಿರಾಧಾರ ಆರೋಪದ ಮೇಲೆ ಸಯೀದ್ ವಿರುದ್ಧ ಎರಡು ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಂತಹ ಆರೋಪಗಳ ಮೇಲೆ ಪೊಲೀಸರು ಸಂವಿಧಾನಿಕವಾಗಿ ಅಥವಾ ಕಾನೂನಾತ್ಮಕವಾಗಿ ಕೇಸು ದಾಖಲಿಸುವಂತಿಲ್ಲವೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಎರಡು ಎಫ್‌ಐಆರ್‌ಗಳು ದಾಖಲಾದ ಹಿನ್ನೆಲೆಯಲ್ಲಿ, ಪೊಲೀಸರು ಸಯೀದ್‌ನನ್ನು ಭಾನುವಾರ ಗೃಹಬಂಧನದಲ್ಲಿ ಇರಿಸಿದರು. ಆದಾಗ್ಯೂ, ಸಯೀದ್ ಬಂಧನಕ್ಕೆ ಯಾವುದೇ ಲಿಖಿತ ಆದೇಶ ನೀಡಿಲ್ಲವೆಂದು ಪೊಲೀಸ್ ಅಧಿಕಾರಿಗಳು ಮತ್ತು ಜೆಯುಡಿ ವಕ್ತಾರ ತಿಳಿಸಿದರು.