ಕಾಠ್ಮಂಡು, ಗುರುವಾರ, 24 ಸೆಪ್ಟೆಂಬರ್ 2009( 19:23 IST )
ನೇಪಾಳ ರಾಜಧಾನಿಯಲ್ಲಿ ನಡೆದ ಮಿಸ್ ನೇಪಾಳ ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಿ ನೂರಾರು ಮಾವೋವಾದಿಗಳು ಗುರುವಾರ ಪ್ರತಿಭಟನೆ ನಡೆಸಿದರು. 'ಮಹಿಳೆಯರ ದೌರ್ಜನ್ಯ' ನಿಲ್ಲಿಸಿ ಎಂದು ಘೋಷಣೆ ಕೂಗುತ್ತಾ ಈ ಮಾವೋವಾದಿಗಳು ರಸ್ತೆ ತಡೆ ನಡೆಸಿದರು. ಆದರೆ ಸೌಂದರ್ಯ ಸ್ಪರ್ಧೆ ಆರಂಭವಾಗುತ್ತಿದ್ದಂತೆಯೇ ಸ್ವಯಂ ಆಗಿ ಅವರೆಲ್ಲರೂ ಚದುರಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ನೂರಾರು ಮಾವೋವಾದಿ ಮಹಿಳೆಯರು ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದ ಸಭಾಮಂದಿರದ ಗೇಟ್ ಹೊರಗೆ ಧರಣಿ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ.
ವಾರ್ಷಿಕ ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಗೆ ನೇಪಾಳದ ಸ್ಪರ್ಧಿಯನ್ನು ಆರಿಸಲು ಮಿಸ್ ನೇಪಾಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಳೆದ ವರ್ಷ ಆಳ್ವಿಕೆಯಲ್ಲಿದ್ದ ಮಾವೋವಾದಿ ಸರಕಾರವು ಇದನ್ನು ನಿಷೇಧಿಸಿದ್ದರಿಂದಾಗಿ 2008ರಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆದಿರಲಿಲ್ಲ.