ವಿಶ್ವಸಂಸ್ಥೆ, ಶುಕ್ರವಾರ, 25 ಸೆಪ್ಟೆಂಬರ್ 2009( 10:18 IST )
ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದ ಕುರಿತು ಭಾರತ ತಾತ್ವಿಕ ನಿಲುವು ತೆಗೆದುಕೊಂಡಿದೆಯೆಂದು ವಿದೇಶಾಂಗ ಸಚಿವ ಎಸ್.ಎಂ,ಕೃಷ್ಣ ತಿಳಿಸಿದ್ದಾರೆ. ನಮ್ಮ ಕಳವಳಗಳನ್ನು ಪರಿಹರಿಸುವ ಇತರೆ ಬೆಳವಣಿಗೆಗಳು ಸಂಭವಿಸುವ ತನಕ ಸಿಟಿಬಿಟಿಗೆ ಸಹಿ ಹಾಕದಿರುವ ತಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲವೆಂದು ಕೃಷ್ಣ ತಿಳಿಸಿದರು.
ನಿಶ್ಶಸ್ತ್ರೀಕರಣ ಕುರಿತು ಗುರುವಾರ ಉನ್ನತ ಮಟ್ಟದ ಸಭೆಯನ್ನು ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ವಹಿಸಿದ್ದರು. ಈ ಸಭೆಯಲ್ಲಿ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿ ಅನುಮೋದಿಸುವಂತೆ ಭಾರತ ಮತ್ತು ಇನ್ನೂ 8 ರಾಷ್ಟ್ರಗಳಿಗೆ ಬಾನ್ ಒತ್ತಾಯಿಸಿದ್ದರು. ಆದರೆ ಭಾರತ ಸಹಿಹಾಕದಿರುವ ನಿಲುವನ್ನು ತೆಗೆದುಕೊಂಡಿದ್ದು, ನಮ್ಮ ನಿಲುವಿನಲ್ಲಿ ಬದಲಾವಣೆ ಮಾಡಲು ಯಾವುದೇ ಕಾರಣ ಕಂಡುಬರುತ್ತಿಲ್ಲವೆಂದು ಕೃಷ್ಣ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದರು.ಇದಕ್ಕೆ ಮುಂಚೆ ಬಾನ್ ಮಾತನಾಡುತ್ತಾ, ಅಣ್ವಸ್ತ್ರ ಪರೀಕ್ಷೆ ವಿರುದ್ಧ ಜಾಗತಿಕ ನಿಯಮ ಸ್ಥಾಪಿಸುವ ಮೂಲಕ, ಸಿಟಿಬಿಟಿಯು ಅಣ್ವಸ್ತ್ರ ಪ್ರಸರಣ ತಡೆಯುವ ವಿಶ್ವಸಮುದಾಯದ ಯತ್ನಗಳಿಗೆ ಮತ್ತು ಪರಮಾಣು ನಿಶ್ಶಸ್ತ್ರೀಕರಣ ಪ್ರವರ್ತನೆಗೆ ಗಮನಾರ್ಹ ಕೊಡುಗೆ ಸಲ್ಲಿಸಿದೆಯೆಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೊರಕ್ಕೊ ವಿದೇಶಾಂಗ ಸಚಿವ ಮತ್ತು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ತೈಬ್ ಫಾಸಿ ಫಿಹ್ರಿ, ಭಾರತ ಮತ್ತು ಪಾಕಿಸ್ತಾನವನ್ನು ನೇರವಾಗಿ ಉಲ್ಲೇಖಿಸದೇ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವ, ಕೆಲವು ರಾಜಕೀಯ ಸಮಸ್ಯೆಗಳಿರುವ ರಾಷ್ಟ್ರಗಳು ನಮ್ಮನ್ನು ಸೇರುತ್ತವೆಂದು ಖಾತರಿಮಾಡುವುದಾಗಿ ಅವರು ಹೇಳಿದರು.
ಇದು ಶಾಂತಿ ಮತ್ತು ಭದ್ರತೆಗೆ ಅವಶ್ಯಕವಾದ್ದರಿಂದ ನಮ್ಮ ಜತೆ ಸೇರಲು ಕೇಳುವುದಾಗಿ ತೈಬ್ ಹೇಳಿದರು.ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಧ್ಯಕ್ಷತೆಯ ಸಭೆಯಲ್ಲಿ ಕೂಡ ಭದ್ರತಾಮಂಡಳಿಯು ಅಣ್ವಸ್ತ್ರಪ್ರಸರಣ ನಿಷೇಧ ಗೊತ್ತುವಳಿಯನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ.