ಭಾರತೀಯರ ಮೇಲೆ ಜನಾಂಗೀಯ ದ್ವೇಷದ ಇನ್ನೊಂದು ದಾಳಿಯಲ್ಲಿ, ಪಾನಮತ್ತ ಆಸ್ಟ್ರೇಲಿಯದ ಸ್ಟಾರ್ ಫುಟ್ಬಾಲ್ ಆಟಗಾರ ಭಾರತೀಯ ಟ್ಯಾಕ್ಸಿ ಚಾಲಕನ ಜತೆ ವಾಗ್ವಾದಕ್ಕಿಳಿದು ಚೆನ್ನಾಗಿ ಥಳಿಸಿದನೆಂದು ವರದಿಯಾಗಿದೆ.
ಮೆಲ್ಬೋರ್ನ್ ಹೂಡಲ್ ಬೀದಿಯಲ್ಲಿ ಫಾಸ್ಟ್ ಫುಡ್ ಔಟ್‌ಲೆಟ್ ಹೊರಗೆ ಭಾರತದ ಕ್ಯಾಬಿಯನ್ನು ಕಾಲಿನಿಂದ ಒದ್ದಿದ್ದಲ್ಲದೇ ಮುಷ್ಠಿಯಿಂದ ಗುದ್ದಿದ ಎಸೆಂಡನ್ ಫುಟ್ಬಾಲ್ ಆಟಗಾರ ಮೈಕೇಲ್ ಹರ್ಲಿಯನ್ನು ಬಂಧಿಸಲಾಗಿದೆ. 19 ವರ್ಷ ವಯಸ್ಸಿನ ಹರ್ಲಿ ದಕ್ಷಿಣ ಮೆಲ್ಬೋರ್ನ್ ರಾತ್ರಿಕ್ಲಬ್ ಹೊರಗೆ ಮುಂಜಾನೆ 5.30ಕ್ಕೆ ಟ್ಯಾಕ್ಸಿಯನ್ನು ಏರಿ ಆಹಾರದ ಔಟ್‌ಲೆಟ್‌ಗೆ ಹೋದರು.
ಕೆಲವು ತಿನಿಸುಗಳನ್ನು ತರಲು ಟ್ಯಾಕ್ಸಿಯನ್ನು ಬಿಟ್ಟು ತೆರಳಿದ ಅವರನ್ನು ಚಾಲಕ ಬಾಡಿಗೆ ಹಣ ಕೇಳಿದಾಗ ಹರ್ಲಿ ಚಾಲಕನಿಗೆ ಹೊಟ್ಟೆಯ ಮೇಲೆ ಒದ್ದಿದ್ದಲ್ಲದೇ, ಗುದ್ದಿದನೆಂದು ಹೆರಾಲ್ಡ್ ಸನ್ ವರದಿ ಮಾಡಿದೆ.ಪೊಲೀಸರು ಸ್ಥಳದಲ್ಲೇ ಹರ್ಲಿಯನ್ನು ಬಂಧಿಸಿ ಫಿಟ್ಜರಾಯ್ ಪೊಲೀಸ್ ಠಾಣೆಗೆ ಒಯ್ದು ಪ್ರಶ್ನಿಸಿದ ತರುವಾಯ ಬಿಡುಗಡೆ ಮಾಡಿದರು.