ಇಸ್ಲಾಮಾಬಾದ್, ಶನಿವಾರ, 26 ಸೆಪ್ಟೆಂಬರ್ 2009( 08:49 IST )
ಪಾಕಿಸ್ತಾನ ಟೆಲಿವಿಷನ್ ನ್ಯೂಸ್(ಪಿಟಿವಿ ನ್ಯೂಸ್)ನ್ನು ಜಮಾತ್ ಉದ್ ದವಾ ಕಾರ್ಯಕರ್ತರು ಮತ್ತು ಜಿಹಾದಿ ಶಕ್ತಿಗಳಿಗೆ ಪ್ರಸಕ್ತ ಸರ್ಕಾರ ಅಧಿಕೃತವಾಗಿ ಹಸ್ತಾಂತರಿಸಿರುವ ವಿಷಯ ಬೆಳಕಿಗೆ ಬಂದಿದೆ.ಒಂದು ಕಡೆ ಹಫೀಜ್ ಸಯೀದ್ ಮತ್ತು ಅವನ ಸಂಘಟನೆ ಜತೆ ತಮಗೆ ಯಾವುದೇ ಸಖ್ಯವಿಲ್ಲವೆಂದು ಸಾಬೀತುಮಾಡಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿರುವ ನಡುವೆ ಈ ಬೆಳವಣಿಗೆ ಸಂಭವಿಸಿದೆ.
ಮಾಹಿತಿ ಸಚಿವಾಲಯದ ಶಿಫಾರಸುಗಳ ಆಧಾರದ ಮೇಲೆ, ಪಿಟಿವಿ ಆಡಳಿತ ಮಂಡಳಿಯು ನಿಷೇಧಿತ ಸಂಘಟನೆಯ ಮಾಜಿ ವಕ್ತಾರ ಇಮ್ರಾನ್ ಮೀರ್‌ನನ್ನು 2009 ಮಾರ್ಚ್‌ನಲ್ಲಿ ಪಿಟಿವಿ ನ್ಯೂಸ್ ಮುಖ್ಯಸ್ಥನನ್ನಾಗಿ ನೇಮಿಸಿತು. ನಿಷೇಧಿತ ಜೆಯುಡಿ ಮತ್ತು ಮಾಧ್ಯಮ ಸಂಘಟನೆಗಳ ಸದಸ್ಯರ ಜತೆ ತನಿಖೆ ಮತ್ತು ಸಂದರ್ಶನದಲ್ಲಿ ಪಿಟಿವಿ ನ್ಯೂಸ್ ಚಾನೆಲ್ ಮುಖ್ಯಸ್ಥ ಇಮ್ರಾನ್ ಮೀರ್, ಜೆಯುಡಿ ಸಂಘಟನೆಯ ಅಧಿಕೃತ ವಕ್ತಾರನಾಗಿ ಕೆಲಸ ಮಾಡಿದ್ದು, ಉದ್ದವಾದ ಗಡ್ಡವನ್ನು ಬಿಟ್ಟಿದ್ದ(ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಹಶಮ್ ಆಮ್ಲ ಅಥವಾ ಪಾಕಿಸ್ತಾನ ಕ್ರಿಕೆಟ್ ಆಟಗಾರ ಮಹಮದ್ ಯುಸುಫ್ ರೀತಿಯಲ್ಲಿ) ಎನ್ನುವುದು ತಿಳಿದುಬಂದಿದೆ.
ಪಿಟಿವಿ ನ್ಯೂಸ್ ಚಾನೆಲ್ ಮುಖ್ಯಸ್ಥನಾಗಿದ್ದು ಸಾಕಾಗದೇ ಮೀರ್ ಇನ್ನೊಬ್ಬ ಜೆಯುಡಿ ಕಾರ್ಯಕರ್ತ ಜಫಾರ್ ಮಲಿಕ್‌ನನ್ನು ಉತ್ಪಾದನೆ ನಿರ್ದೇಶಕನಾಗಿ ತಂದಿರಿಸಿದ್ದ. ಕಾಶ್ಮೀರ ಮತ್ತು ಆಫ್ಘಾನಿಸ್ತಾನದ ಜಿಹಾದಿ ಸಂಘಟನೆಗಳ ಜತೆ ನಂಟಿಗೆ ಮಲಿಕ್ ಹೆಸರಾಗಿದ್ದ.ಇಮ್ರಾನ್ ಮಿರ್‌ನನ್ನು ಈ ಕುರಿತು ಪತ್ರಿಕೆಯೊಂದು ಪ್ರಶ್ನಿಸಿದಾಗ, ಜೆಯುಡಿ ಜತೆ ಯಾವುದೇ ಸಖ್ಯವನ್ನು ನಿರಾಕರಿಸಿದ್ದಾನೆ. ಜೆಯುಡಿ ಸಂಘಟನೆ ಘಾಝ್ವಾ ಸುದ್ದಿಪತ್ರಿಕೆಗೆ ಮಿರ್ ಡೆಪ್ಯೂಟಿ ಸಂಪಾದಕನಾಗಿ ಕೆಲಸ ಮಾಡುತ್ತಿದ್ದನೆಂದು ಜೆಯುಡಿಯ ವಕ್ತಾರ ಅತಿಖ್ ಚೌಹಾನ್ ತಿಳಿಸಿದ್ದಾನೆ. ಘಾಜ್ವಾಗೆ ಕೆಲಸ ಮಾಡುವಾಗ ಉದ್ದವಾದ ಗಡ್ಡವನ್ನು ಮಿರ್ ಬಿಟ್ಟಿದ್ದನೆಂದು ಅವರು ಹೇಳಿದ್ದಾರೆ.