ಪಿಟ್ಸ್ಬರ್ಗ್, ಶನಿವಾರ, 26 ಸೆಪ್ಟೆಂಬರ್ 2009( 09:15 IST )
PTI
PTI
ಪಾಕಿಸ್ತಾನದ ಜತೆ ಭಾರತ ಬಾಂಧವ್ಯ ಸುಧಾರಣೆಗೆ ಬಯಸಿದೆ. ಆದರೆ ಪಾಕಿಸ್ತಾನವು ರಾಷ್ಟ್ರನೀತಿಯ ಸಾಧನವಾಗಿ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಬಳಸುವ ಮನಸ್ಥಿತಿಯನ್ನು ಕಳಚಿಕೊಂಡು ಮುಂಬೈ ಭಯೋತ್ಪಾದನೆ ದಾಳಿಗಳಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಶರ್ಮ್ ಎಲ್ ಶೇಕ್‌ನಲ್ಲಿ ತಮ್ಮ ಸಹವರ್ತಿ ಯುಸುಫ್ ರಾಜಾ ಗಿಲಾನಿ ಜತೆ ಮಾತುಕತೆ ನಡೆದಾಗಿನಿಂದ ಪಾಕಿಸ್ತಾನದ ಬಗ್ಗೆ ಭಾರತದ ನಿಲುವಿನಲ್ಲಿ ವ್ಯತ್ಯಾಸವಿಲ್ಲವೆಂದು ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನದ ಜತೆ ಸಂಬಂಧ ಸಹಜಸ್ಥಿತಿಗೆ ತರಲು ಭಾರತ ಬಯಸುತ್ತದೆ.
ಆದರೆ ಭಯೋತ್ಪಾದನೆಯನ್ನು ರಾಷ್ಟ್ರ ನೀತಿಯಾಗಿ ಬಳಸುವ ತನ್ನ ಹಳೆಯ ಮನೋಭಾವವನ್ನು ಪಾಕಿಸ್ತಾನ ಕಳಚಿಕೊಳ್ಳದಿರುವುದು ತೊಡಕಾಗಿದೆಯೆಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಾವು ಅವರಿಗೆ ಸಾಮಗ್ರಿ ಮತ್ತು ಸಾಕ್ಷ್ಯಾಧಾರವನ್ನು ತನಿಖೆ ನಡೆಸಲು ಪೂರೈಸಿದ್ದೇವೆ.
ಭಾರತದಲ್ಲಿ ಭಯೋತ್ಪಾದನೆ ದುರಂತ ಸಂಭವಿಸಿದರೂ, ಒಳಸಂಚು ಪಾಕಿಸ್ತಾನದಲ್ಲಿ ನಡೆಯಿತು. ಆದ್ದರಿಂದ ನ.26ರ ದಾಳಿಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಪಾಕಿಸ್ತಾನ ಶಿಕ್ಷಿಸಬೇಕು ಎಂದು ಸಿಂಗ್ ಹೇಳಿದರು.ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡರೆ ಸಂಬಂಧ ಸುಧಾರಣೆಗೆ ಭಾರತ ಇನ್ನಷ್ಟು ಮುಂದಡಿಯಿಡುತ್ತದೆಂದು ತಾವು ಈಗಾಗಲೇ ಹೇಳಿದ್ದನ್ನು ಸಿಂಗ್ ನೆನಪಿಸಿಕೊಂಡರು.