ಸರ್ಕಾರಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಹತನಾದ ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಪೋಷಕರು ಮತ್ತು ಬಂಧುಗಳನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲವೆಂದು ಅಧ್ಯಕ್ಷ ಮಹೀಂದ್ರ ರಾಜಪಕ್ಷ ತಿಳಿಸಿದ್ದಾರೆ. ಪ್ರಭಾಕರನ್ ಪೋಷಕರು, ಮಾಜಿ ಎಲ್‌ಟಿಟಿಇ ನಾಯಕ ತಮಿಳುಸೆಲ್ವಂ ಪತ್ನಿ ಮತ್ತು ಎಲ್‌ಟಿಟಿಇ ಉನ್ನತ ನಾಯಕರ ನಿಕಟಸಂಬಂಧಿಗಳು ಸಂತ್ರಸ್ತರಾಗಿದ್ದು, ನಮ್ಮ ಭದ್ರತಾ ಸಿಬ್ಬಂದಿ ಅವರಿಗೆ ನೆರವು ನೀಡುತ್ತಿದೆಯೆಂದು ತಿಳಿಸಿದರು.
ವಾನ್ನಿ ಪರಿಹಾರ ಶಿಬಿರದಲ್ಲಿ ಪ್ರಭಾಕರನ್ ಪೋಷಕರನ್ನು ಅವಮಾನಿಸಲಾಗುತ್ತಿದೆಯೆಂಬ ವರದಿಗಳನ್ನು ನಿರಾಕರಿಸಿದ ರಾಜಪಕ್ಷ, ಸುಮಾರು 3,00,000 ಸಂತ್ರಸ್ತರನ್ನು ಸೌಹಾರ್ದ ಮತ್ತು ಸ್ನೇಹಭಾವದಿಂದ ನಮ್ಮ ಸರ್ಕಾರ ನಡೆಸಿಕೊಳ್ಳುತ್ತಿದೆಯೆಂದು ತಿಳಿಸಿದರು. ಕೆಲವು ಸಂಕುಚಿತ ಮನೋಭಾವದ ರಾಜಕಾರಣಿಗಳು ದೇಶದ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆಂದು ಟೀಕಿಸಿದ ಅವರು, ಮಗನ ನಿರ್ದಯತೆ ಹಿನ್ನೆಲೆಯಲ್ಲಿ ನಾವು ತಂದೆಯನ್ನು ಶಿಕ್ಷಿಸುವುದಿಲ್ಲ.
ಆದ್ದರಿಂದ ನಾವು ಪ್ರಭಾಕರನ್ ಪೋಷಕರ ಜತೆ ಕೂಡ ಕೆಟ್ಟದಾಗಿ ವರ್ತಿಸದೇ ನೋಡಿಕೊಳ್ಳುತ್ತೇವೆಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ದೇಶದ ಮೂಲೆ, ಮೂಲೆ ಬೃಹತ್ ಅಭಿವೃದ್ಧಿ ಯೋಜನೆಗಳ ಫಲವನ್ನು ಜನರು ಅನುಭವಿಸುತ್ತಾರೆಂದು ಅವರು ನುಡಿದರು.