ಪಾಕಿಸ್ತಾನದ ವಾಯವ್ಯ ಬನ್ನುವಿನ ಪೊಲೀಸ್ ಠಾಣೆಯೊಂದರಲ್ಲಿ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 6 ಜನರು ಸತ್ತಿದ್ದು, 30 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ಪೊಲೀಸ್ ಠಾಣೆ ಮತ್ತು ಸಮೀಪದ ಅನೇಕ ಮನೆಗಳು ಕುಸಿದಿದ್ದರಿಂದ ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ನಿರೀಕ್ಷಿಸಲಾಗಿದೆ. ತಾವು ಸ್ವತಃ ಐದು ಮೃತದೇಹಗಳನ್ನು ಕಂಡಿದ್ದಾಗಿ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಮೊಹಮದ್ ಜಾಹಿದ್ ತಿಳಿಸಿದ್ದಾರೆ.
ಉತ್ತರವಾಜಿರಿಸ್ತಾನಕ್ಕೆ ದ್ವಾರವೆಂದು ಹೇಳಲಾದ ಬನ್ನು ಆಫ್ಘನ್ ಗಡಿಯಲ್ಲಿ ಪ್ರಕ್ಷುಬ್ಧ ಬುಡಕಟ್ಟು ಪ್ರದೇಶವಾಗಿದ್ದು, ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರಗಾಮಿಗಳಿಗೆ ಪ್ರಮುಖ ಆಶ್ರಯತಾಣವಾಗಿದೆ.