ಅಮೆರಿಕದ ಜತೆ ಮೈತ್ರಿ ಕೊನೆಗೊಳಿಸಿ ಆಫ್ಘಾನಿಸ್ತಾನದಿಂದ ಪಡೆಗಳನ್ನು ಹಿಂತೆಗೆದುಕೊಳ್ಳಿ ಎಂದು ಅಲ್ ಖಾಯಿದಾ ನಾಯಕ ಒಸಾಮಾ ಬಿನ್ ಲಾಡೆನ್ ಐರೋಪ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾನೆಂದು ಸೈಟ್ ಗುಪ್ತಚರ ಸಮೂಹ ಶುಕ್ರವಾರ ತಿಳಿಸಿದೆ. ವಾಷಿಂಗ್ಟನ್ನಿನ ಕ್ರಿಮಿನಲ್‌ಗಳ ಗ್ಯಾಂಗಿಗೆ ಬುದ್ಧಿವಂತ ವ್ಯಕ್ತಿ ತನ್ನ ಹಣ ಮತ್ತು ಪುತ್ರರನ್ನು ವ್ಯರ್ಥ ಮಾಡಬಾರದೆಂದು ಬಿನ್ ಲಾಡೆನ್ ಹೇಳಿಕೆ ಉಲ್ಲೇಖಿಸಿ ಸೈಟ್ ತಿಳಿಸಿದೆ.
ಸಮ್ಮಿಶ್ರ ಕೂಟದ ಸುಪ್ರೀಂಕಮಾಂಡರ್‌ಗೆ ಮಾನವ ಜೀವಗಳ ಬಗ್ಗೆ ಬೆಲೆಯಿಲ್ಲದೇ ಗ್ರಾಮಸ್ಥರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದು ಅಂತಹ ಸಮ್ಮಿಶ್ರ ಕೂಟದಲ್ಲಿ ಭಾಗಿಯಾಗುವುದು ನಾಚಿಗೆಗೇಡಿನ ಸಂಗತಿಯೆಂದು ಅಮೆರಿಕ ಮೂಲದ ಸೈಟ್ ಹೇಳಿದೆ. ಆಫ್ಘಾನಿಸ್ತಾನದಲ್ಲಿ ಅಮೆರಿಕದ ಮಿತ್ರಕೂಟ ಮತ್ತು ಸಹಾಯಕರು ಮಾಡಿದ್ದನ್ನು ಐರೋಪ್ಯರು ಕಂಡರೆ, ಲಂಡನ್ ಮತ್ತು ಮ್ಯಾಡ್ರಿಡ್ ಮೇಲಿನ ದಾಳಿಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆಂದು ಜಿಹಾದಿ ಇಂಟರ್‌ನೆಟ್ ವೇದಿಕೆಯಲ್ಲಿ ಬಿಡುಗಡೆಯಾದ ಹೊಸ ಧ್ವನಿಮುದ್ರಿತ ಸಂದೇಶದಲ್ಲಿ ಅಲ್ ಖಾಯಿದಾ ಮುಖ್ಯಸ್ಥ ಹೇಳಿದ್ದಾನೆ.
ಅಲ್ ಖಾಯಿದಾ ಶೋಷಿತರ ಪರವಾಗಿ ಶೋಷಣೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆಂದು ಬಿನ್ ಲಾಡೆನ್ ಬೆದರಿಕೆ ಹಾಕಿದ್ದಾನೆ. ಇಂದು ಯುರೋಪ್ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದ್ದರೆ, ಯುರೋಪ್ ಹೃದಯಭಾಗವು ವಿಶ್ವರಫ್ತಿನಲ್ಲಿ ನಂ.1 ಸ್ಥಾನ ಕಳೆದುಕೊಂಡಿರುವಾಗ, ಆರ್ಥಿಕ ಸಮರದಿಂದ ಉಂಟಾದ ರಕ್ತಸ್ರಾವದಿಂದ ಅಮೆರಿಕ ಹಿಂದೆಸರಿದರೂ ನೀವು ಹೇಗೆ ಮುಂದುವರಿಯುತ್ತೀರಿ ಎಂದು ಬಿನ್ ಲಾಡೆನ್ ಕೇಳಿದ್ದಾನೆ.