ಫಿಲಿಪೈನ್ಸ್‌ನಾದ್ಯಂತ ರೌದ್ರಾವತಾರದ ಗುಡುಗು-ಮಳೆ ಹಾಗೂ ಕೆಟ್ಸಾನಾ ಚಂಡಮಾರುತದಿಂದಾಗಿ ಸುಮಾರು 100ಮಂದಿ ಬಲಿಯಾಗಿದ್ದು, ರಾಜಧಾನಿಯಲ್ಲಿ ಕಳೆದ 40ವರ್ಷಗಳಲ್ಲಿ ಸುರಿಯದಷ್ಟು ಜಡಿಮಳೆ ಸುರಿದು ದಾಖಲೆ ಸೃಷ್ಟಿಸಿರುವುದಾಗಿ ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ 50ಮಂದಿ ನಾಪತ್ತೆಯಾಗಿದ್ದಾರೆ. 2005ರ ಆಗಸ್ಟ್ ತಿಂಗಳಲ್ಲಿ ನ್ಯೂ ಓರ್ಲೆನ್ಸ್‌ನಲ್ಲಿ ಕತ್ರಿನಾ ಚಂಡಮಾರುತದಂತೆಯೇ ಈ ಬಾರಿ ಬಿರುಗಾಳಿ ದೊಡ್ಡ ಅನಾಹುತವನ್ನೇ ಉಂಟು ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮನಿಲಾ ಪ್ರದೇಶದಲ್ಲಿ ಭೀಕರ ಮಳೆ ಮತ್ತು ಚಂಡಮಾರುತದಿಂದ ತತ್ತರಿಸಿಹೋಗಿದ್ದು, ಸಾವಿರಾರು ಜನರು ರಾತ್ರಿಯೆಲ್ಲಾ ಒಂದೇ ಸೂರಿನಡಿಯಲ್ಲಿ ಕಾಲಕಳೆದಿದ್ದರು. ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರುಗಳನ್ನು ದಾರಿಮಧ್ಯೆದಲ್ಲಿ ಸೆರೆಹಿಡಿಯುವ ಕಾರ್ಯವನ್ನೂ ಮಾಡಲಾಗುತ್ತಿದೆ.
ಸೈನಿಕರು ಮತ್ತು ಸ್ವಯಂಸೇವಕರು ಸುಮಾರು 5ಸಾವಿರ ಜನರನ್ನು ಅಪಾಯದಿಂದ ರಕ್ಷಿಸಿರುವುದಾಗಿ ರಕ್ಷಣಾ ಕಾರ್ಯದರ್ಶಿ ಗಿಲ್ಬರ್ಟ್ ಟಿಯೋಡೊರೋ ತಿಳಿಸಿದ್ದಾರೆ.